
ನವದೆಹಲಿ, 23 ಜನವರಿ (ಹಿ.ಸ.) :
ಆ್ಯಂಕರ್ : ಆಜಾದ್ ಹಿಂದ್ ಫೌಜ್‌ನ ಮಹಾನ್ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ, ಕೃತಜ್ಞ ರಾಷ್ಟ್ರ ಇಂದು ಅವರನ್ನು ಭಾವಪೂರ್ಣವಾಗಿ ಸ್ಮರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ನೇತಾಜಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ.
ನೇತಾಜಿಯವರ ತ್ಯಾಗ ಮತ್ತು ಆದರ್ಶಗಳು ತಮಗೆ ಸದಾ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಅವರ ಜನ್ಮ ವಾರ್ಷಿಕೋತ್ಸವ ಶೌರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದು, ಅವರ ಆದರ್ಶಗಳು ಮುಂದಿನ ಪೀಳಿಗೆಗಳಿಗೂ ದಾರಿದೀಪವಾಗುತ್ತವೆ ಎಂದು ಮೋದಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಒಂದರಲ್ಲಿ ಅವರು,
“ನೇತಾಜಿ ಸುಭಾಷ್ ಚಂದ್ರ ಬೋಸ್ ನನಗೆ ಸದಾ ಪ್ರೇರಣೆಯ ಮೂಲ. 2009ರ ಜನವರಿ 23ರಂದು ಗುಜರಾತ್‌ನ ಹರಿಪುರದಿಂದ ‘ಇ-ಗ್ರಾಮ್ ವಿಶ್ವಗ್ರಾಮ’ ಯೋಜನೆಯನ್ನು ಪ್ರಾರಂಭಿಸಿದ್ದೆ. ಐಟಿ ಕ್ಷೇತ್ರದ ಮೂಲಕ ಗ್ರಾಮೀಣ ಅಭಿವೃದ್ಧಿಗೆ ದಿಕ್ಕು ನೀಡುವ ಈ ವಿಶಿಷ್ಟ ಯೋಜನೆ, ನೇತಾಜಿಯವರ ಜೀವನದಲ್ಲಿ ಪ್ರಮುಖ ಸ್ಥಾನ ಹೊಂದಿದ ಹರಿಪುರದಿಂದಲೇ ಆರಂಭಗೊಂಡಿತು. ನೇತಾಜಿ ನಡೆದಾಡಿದ ಅದೇ ರಸ್ತೆಯಲ್ಲಿ ಹರಿಪುರದ ಜನರು ನನಗೆ ನೀಡಿದ ಆತ್ಮೀಯ ಸ್ವಾಗತವನ್ನು ನಾನು ಎಂದಿಗೂ ಮರೆಯಲಾರೆ,” ಎಂದು ನೆನಪಿಸಿಕೊಂಡಿದ್ದಾರೆ.
ಇನ್ನೊಂದು ಪೋಸ್ಟ್‌ನಲ್ಲಿ,
“ನೇತಾಜಿಯವರ ಗೌರವಾರ್ಥವಾಗಿ ಅವರ ಜನ್ಮದಿನವನ್ನು ‘ಪರಾಕ್ರಮ ದಿವಸ್’ ಎಂದು ಘೋಷಿಸಲಾಗಿದೆ. 2021ರಲ್ಲಿ ಕೋಲ್ಕತ್ತಾದ ನೇತಾಜಿ ಭವನಕ್ಕೆ ನಾನು ಭೇಟಿ ನೀಡಿದ್ದೆ. ಇದೇ ಭವನದಿಂದಲೇ ನೇತಾಜಿ ತಮ್ಮ ಮಹಾನ್ ರಾಷ್ಟ್ರಸೇವೆಯ ಪಯಣವನ್ನು ಆರಂಭಿಸಿದ್ದರು. ಪರಾಕ್ರಮ ದಿವಸ್ ಆಚರಣೆಯ ಮೂಲಕ ರಾಷ್ಟ್ರವು ಅವರ ಅದಮ್ಯ ಧೈರ್ಯ, ದೃಢನಿಶ್ಚಯ ಮತ್ತು ದೇಶಕ್ಕೆ ನೀಡಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸುತ್ತದೆ,” ಎಂದು ಮೋದಿ ಹೇಳಿದ್ದಾರೆ.
ಮತ್ತೊಂದು ಸಂದೇಶದಲ್ಲಿ ಪ್ರಧಾನಿ,
“ವಸಾಹತುಶಾಹಿ ಚಿಂತನೆಯಿಂದ ಮುಕ್ತರಾಗುವ ನಮ್ಮ ಪ್ರಯತ್ನಗಳು ಹಾಗೂ ನೇತಾಜಿಯವರ ಮೇಲಿನ ಗೌರವವು, ಇಂಡಿಯಾ ಗೇಟ್ ಬಳಿ ಸ್ಥಾಪಿಸಿರುವ ಅವರ ಭವ್ಯ ಪ್ರತಿಮೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಪ್ರತಿಮೆ ಮುಂದಿನ ಪೀಳಿಗೆಗಳಿಗೆ ನಿರಂತರ ಸ್ಫೂರ್ತಿಯ ಮೂಲವಾಗಲಿದೆ,” ಎಂದು ಬರೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa