ದೆಹಲಿ–ಎನ್‌ಸಿಆರ್‌ನಲ್ಲಿ ಮಾಲಿನ್ಯ ಮಟ್ಟ ಇಳಿಕೆ
ನವದೆಹಲಿ, 02 ಜನವರಿ (ಹಿ.ಸ.) : ಆ್ಯಂಕರ್ : ಹೊಸ ವರ್ಷದ ಆರಂಭದಲ್ಲಿ ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಶುಕ್ರವಾರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 236ಕ್ಕೆ ದಾಖಲಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಎನ್‌
Delhi air


ನವದೆಹಲಿ, 02 ಜನವರಿ (ಹಿ.ಸ.) :

ಆ್ಯಂಕರ್ : ಹೊಸ ವರ್ಷದ ಆರಂಭದಲ್ಲಿ ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಶುಕ್ರವಾರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 236ಕ್ಕೆ ದಾಖಲಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಎನ್‌ಸಿಆರ್ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಗ್ರ್ಯಾಪ್–3 ನಿರ್ಬಂಧಗಳನ್ನು ತಕ್ಷಣದಿಂದಲೇ ಹಿಂಪಡೆಯಲು ನಿರ್ಧರಿಸಿದೆ.

ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಸಿಎಕ್ಯೂಎಂನ ಗ್ರ್ಯಾಪ್ ಉಪಸಮಿತಿಯು ಈ ತೀರ್ಮಾನ ಕೈಗೊಂಡಿದೆ. ಆದಾಗ್ಯೂ, ಗ್ರ್ಯಾಪ್ ಹಂತ–1 ಮತ್ತು ಹಂತ–2 ಅಡಿಯಲ್ಲಿ ಜಾರಿಯಲ್ಲಿರುವ ಎಲ್ಲಾ ನಿಯಂತ್ರಣ ಕ್ರಮಗಳು ಮುಂದುವರಿಯಲಿವೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಸಿಎಕ್ಯೂಎಂ ಹೊರಡಿಸಿದ ಆದೇಶದಲ್ಲಿ, “ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಗ್ರ್ಯಾಪ್‌ನ ಮೂರನೇ ಹಂತದ ಅಡಿಯಲ್ಲಿ ಕಲ್ಪಿಸಲಾದ ಎಲ್ಲಾ ಕ್ರಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ” ಎಂದು ತಿಳಿಸಲಾಗಿದೆ. ಗುರುವಾರ 380ರಷ್ಟಿದ್ದ ದೆಹಲಿಯ AQI, ಶುಕ್ರವಾರ ಸಂಜೆ 4 ಗಂಟೆಗೆ 236ಕ್ಕೆ ಇಳಿದಿದೆ ಎಂದು ಆಯೋಗ ಮಾಹಿತಿ ನೀಡಿದೆ.

ಗ್ರ್ಯಾಪ್–3 ನಿರ್ಬಂಧಗಳ ಅಡಿಯಲ್ಲಿ ಅನಿವಾರ್ಯವಲ್ಲದ ನಿರ್ಮಾಣ ಹಾಗೂ ಧ್ವಂಸ ಚಟುವಟಿಕೆಗಳಿಗೆ ನಿಷೇಧ ವಿಧಿಸಲಾಗಿತ್ತು. ಜೊತೆಗೆ ಕಲ್ಲು ಪುಡಿಮಾಡುವಿಕೆ, ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿತ್ತು. ಮನೆಗಳಿಂದ ಕೆಲಸ ಮಾಡುವಂತೆ ಸಲಹೆ ನೀಡಲಾಗಿದ್ದು, ಇತರ ರಾಜ್ಯಗಳಿಂದ ದೆಹಲಿಗೆ ಬರುವ ಡೀಸೆಲ್ ಬಸ್‌ಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿತ್ತು.

ಗಾಳಿಯ ಗುಣಮಟ್ಟದಲ್ಲಿ ಕಂಡುಬಂದ ಈ ಸುಧಾರಣೆ ನಾಗರಿಕರಿಗೆ ಸ್ವಲ್ಪ ನಿರಾಳತೆ ನೀಡಿದರೂ, ಮುಂದಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿದ್ದರೆ ಮತ್ತೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande