ಪಿಪ್ರಾಹ್ವಾ ಪವಿತ್ರ ಅವಶೇಷಗಳ ಅಂತಾರಾಷ್ಟ್ರೀಯ ಪ್ರದರ್ಶನಕ್ಕೆ ನಾಳೆ ಪ್ರಧಾನಿ ಚಾಲನೆ
ನವದೆಹಲಿ, 02 ಜನವರಿ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಪಿಪ್ರಾಹ್ವಾದ ಪವಿತ್ರ ಅವಶೇಷಗಳ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ವಿಶಿಷ್ಟ ಪ್ರ
Bhagwan-Buddha


ನವದೆಹಲಿ, 02 ಜನವರಿ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಪಿಪ್ರಾಹ್ವಾದ ಪವಿತ್ರ ಅವಶೇಷಗಳ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ವಿಶಿಷ್ಟ ಪ್ರದರ್ಶನಕ್ಕೆ “ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್” ಎಂದು ಹೆಸರಿಡಲಾಗಿದೆ.

ಈ ಪ್ರದರ್ಶನದಲ್ಲಿ ಪಿಪ್ರಾಹ್ವಾದ ಪೂಜ್ಯ ಪವಿತ್ರ ಅವಶೇಷಗಳೊಂದಿಗೆ ಅವುಗಳಿಗೆ ಸಂಬಂಧಿಸಿದ ಪ್ರಮುಖ ಪ್ರಾಚೀನ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ.

ಭಗವಾನ್ ಬುದ್ಧನ ಬೋಧನೆಗಳೊಂದಿಗೆ ಭಾರತದ ಅವಿನಾಭಾವ ನಾಗರಿಕ ಸಂಬಂಧಗಳು ಹಾಗೂ ದೇಶದ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸಿ ಪ್ರಸ್ತುತಪಡಿಸುವ ಭಾರತದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.

ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಅವರು ಪೋಸ್ಟ್ ಹಂಚಿಕೊಂಡು, “ಜನವರಿ 3 ಭಗವಾನ್ ಬುದ್ಧನ ಇತಿಹಾಸ, ಸಂಸ್ಕೃತಿ ಮತ್ತು ಆದರ್ಶಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ವಿಶೇಷ ದಿನ. ಬೆಳಿಗ್ಗೆ 11 ಗಂಟೆಗೆ ದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಪಿಪ್ರಾಹ್ವಾ ಪವಿತ್ರ ಅವಶೇಷಗಳ ಭವ್ಯ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಒಂದು ಶತಮಾನಕ್ಕಿಂತ ಹೆಚ್ಚು ಕಾಲದ ನಂತರ ಮರಳಿ ತರಲಾದ ಪಿಪ್ರಾಹ್ವಾ ಅವಶೇಷಗಳು, ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಹಾಗೂ ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದ ಸಂಗ್ರಹಗಳಲ್ಲಿ ಸಂರಕ್ಷಿಸಲ್ಪಟ್ಟಿರುವ ಮಹತ್ವದ ಪುರಾತತ್ವ ವಸ್ತುಗಳೊಂದಿಗೆ ಈ ಪ್ರದರ್ಶನದಲ್ಲಿ ಸೇರಿವೆ. ಮತ್ತೊಂದು ಪೋಸ್ಟ್‌ನಲ್ಲಿ ಪ್ರಧಾನಿ, “ಈ ಪ್ರದರ್ಶನವು ಭಗವಾನ್ ಬುದ್ಧನ ಬೋಧನೆಗಳನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಮ್ಮ ಬದ್ಧತೆಗೆ ತಕ್ಕದ್ದಾಗಿದೆ. ಇದು ಯುವಜನರು ಮತ್ತು ನಮ್ಮ ಶ್ರೀಮಂತ ಸಂಸ್ಕೃತಿಯ ನಡುವಿನ ಬಾಂಧವ್ಯವನ್ನು ಗಾಢಗೊಳಿಸುವ ಪ್ರಯತ್ನ. ಈ ಅವಶೇಷಗಳನ್ನು ಮರಳಿ ತರಲು ಶ್ರಮಿಸಿದ ಎಲ್ಲರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದ್ದಾರೆ.

ಸಂಸ್ಕೃತಿ ಸಚಿವಾಲಯದ ಪ್ರಕಾರ, ಈ ಪ್ರದರ್ಶನದ ಉದ್ಘಾಟನೆ ಭಾರತದ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದ್ದು, ಪ್ರಪಂಚದಾದ್ಯಂತದ ಬೌದ್ಧ ಸಮುದಾಯಗಳಿಂದ ಪೂಜಿಸಲ್ಪಡುವ ಅಪಾರ ಐತಿಹಾಸಿಕ, ಪುರಾತತ್ವ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ಪವಿತ್ರ ಅವಶೇಷಗಳು ಇಲ್ಲಿ ಪ್ರದರ್ಶಿತವಾಗಲಿವೆ.

ಪಿಪ್ರಾಹ್ವಾ ಅವಶೇಷಗಳನ್ನು 19ನೇ ಶತಮಾನದ ಉತ್ತರಾರ್ಧದಲ್ಲಿ ಪತ್ತೆಹಚ್ಚಲಾಗಿದ್ದು, ಅವು ಶಾಕ್ಯ ವಂಶದವರು ಸಂರಕ್ಷಿಸಿದ್ದ ಭಗವಾನ್ ಗೌತಮ ಬುದ್ಧನ ಮಹಾಪರಿನಿರ್ವಾಣ ಅವಶೇಷಗಳೆಂದು ವ್ಯಾಪಕವಾಗಿ ನಂಬಲಾಗಿದೆ. ಈ ಅವಶೇಷಗಳ ವಾಪಸ್ಸು ಮತ್ತು ಸಾರ್ವಜನಿಕ ಪ್ರದರ್ಶನವು ಭಾರತದ ಸಾಂಸ್ಕೃತಿಕ ಪರಂಪರೆ ಸಂರಕ್ಷಣಾ ಪ್ರಯತ್ನಗಳ ಜೊತೆಗೆ ಬುದ್ಧನ ಸಾರ್ವತ್ರಿಕ ಬೋಧನೆಗಳಾದ ಶಾಂತಿ, ಕರುಣೆ ಮತ್ತು ಜ್ಞಾನೋದಯದ ಸಂದೇಶವನ್ನು ಜಗತ್ತಿಗೆ ಪಸರಿಸುತ್ತದೆ.

ಪ್ರದರ್ಶನದಲ್ಲಿ ಪಿಪ್ರಾಹ್ವಾದ ಪವಿತ್ರ ಅವಶೇಷಗಳು ಮತ್ತು ಸಂಬಂಧಿತ ಪ್ರಾಚೀನ ವಸ್ತುಗಳನ್ನು ಅವುಗಳ ಐತಿಹಾಸಿಕ, ಆಧ್ಯಾತ್ಮಿಕ ಮತ್ತು ಪುರಾತತ್ವ ಹಿನ್ನೆಲೆಯಲ್ಲಿ ವಿವರಿಸುವ ವಿಶೇಷವಾಗಿ ಸಂಗ್ರಹಿಸಲಾದ ಗ್ಯಾಲರಿಗಳು ಇರಲಿವೆ. ಬೌದ್ಧಧರ್ಮದ ಜನ್ಮಸ್ಥಳವಾಗಿ ಭಾರತದ ಪಾತ್ರವನ್ನು ಎತ್ತಿ ತೋರಿಸುವ ವಿವರಣಾತ್ಮಕ ಪ್ರಸ್ತುತಿಗಳೂ ಪ್ರದರ್ಶನದ ಭಾಗವಾಗಿದ್ದು, ವಿದ್ವಾಂಸರು, ಭಕ್ತರು ಮತ್ತು ಸಾಮಾನ್ಯ ಜನರಿಗೆ ಸಮೃದ್ಧ ಅನುಭವವನ್ನು ಒದಗಿಸುವಂತೆ ಪ್ರದರ್ಶನವನ್ನು ರೂಪಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande