ತಂದೆ ಕಾರ್ಯ ಸ್ಮರಿಸಿದ ಈಶ್ವರ ಖಂಡ್ರೆ
ಬೀದರ್, 17 ಜನವರಿ (ಹಿ.ಸ.) : ಆ್ಯಂಕರ್ : ಬಡವ–ಶ್ರೀಮಂತ, ಮೇಲ್ಜಾತಿ–ಕೀಳುಜಾತಿ ಎಂಬ ಭೇದಭಾವವೇ ತಪ್ಪು ಎಂಬ ದೃಢ ನಂಬಿಕೆಯನ್ನು ಜೀವನಪೂರ್ತಿ ಪ್ರತಿಪಾದಿಸುತ್ತ, 1960ರ ದಶಕದಲ್ಲೇ ಅಸ್ಪೃಶ್ಯತೆ ವಿರುದ್ಧ ಸಮಾಜಮುಖಿ ಹೋರಾಟ ನಡೆಸಿದ್ದವರು ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ ಎಂದು ಅರಣ್ಯ, ಜೀವಿಶಾಸ್
Khandre


ಬೀದರ್, 17 ಜನವರಿ (ಹಿ.ಸ.) :

ಆ್ಯಂಕರ್ : ಬಡವ–ಶ್ರೀಮಂತ, ಮೇಲ್ಜಾತಿ–ಕೀಳುಜಾತಿ ಎಂಬ ಭೇದಭಾವವೇ ತಪ್ಪು ಎಂಬ ದೃಢ ನಂಬಿಕೆಯನ್ನು ಜೀವನಪೂರ್ತಿ ಪ್ರತಿಪಾದಿಸುತ್ತ, 1960ರ ದಶಕದಲ್ಲೇ ಅಸ್ಪೃಶ್ಯತೆ ವಿರುದ್ಧ ಸಮಾಜಮುಖಿ ಹೋರಾಟ ನಡೆಸಿದ್ದವರು ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸ್ಮರಿಸಿದರು.

ಶುಕ್ರವಾರ ಶಿವೈಕ್ಯರಾದ ತಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ನೂರು ವರ್ಷಗಳ ಕಾಲ ಕಾಯಕಯೋಗಿಯಾಗಿ, ಕರ್ಮಯೋಗಿಯಾಗಿ ಜನರಿಗಾಗಿ ಬದುಕಿದ ಮಹನೀಯರು ತಮ್ಮ ತಂದೆ ಎಂದು ಭಾವುಕರಾಗಿ ನುಡಿದರು.

ಮುಟ್ಟಿ–ತಟ್ಟಿ ಎಂಬ ಅನಿಷ್ಠ ಅಸ್ಪೃಶ್ಯತೆ ವಿರುದ್ಧ ಸಿಡಿದು ನಿಂತ ಭೀಮಣ್ಣ ಖಂಡ್ರೆ, ತಮ್ಮ ಸಮುದಾಯದ ಹಿರಿಯರನ್ನೇ ಎದುರು ಹಾಕಿಕೊಂಡು ಸಮಾಜ ಪರಿವರ್ತನೆಗಾಗಿ ಹೋರಾಟ ನಡೆಸಿದ್ದರು. ತಮ್ಮ ದೀಕ್ಷಾಗುರು ಚನ್ನಬಸವ ಪಟ್ಟದ್ದೇವರನ್ನು ಮನವೊಲಿಸಿ, ಅಶೋಕನಗರದ ನಿವಾಸಿಗಳನ್ನು ಭಾಲ್ಕಿ ಮಠಕ್ಕೆ ಕರೆತಂದು ಸ್ನಾನ ಹಾಗೂ ವಿಭೂತಿ ಧಾರಣೆ ಮಾಡಿಸಿ, ಭಾಲ್ಕೇಶ್ವರ ದೇವಾಲಯದ ಸಿಹಿನೀರಿನ ಬಾವಿಯಿಂದ ನೀರು ಸೇದಿಸಿ ಕುಡಿಸುವ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿದ್ದರು ಎಂಬುದನ್ನು ಈಶ್ವರ ಖಂಡ್ರೆ ನೆನಪಿಸಿಕೊಂಡರು.

102 ವರ್ಷಗಳ ಸಾರ್ಥಕ ಜೀವನ ನಡೆಸಿದ ಭೀಮಣ್ಣ ಖಂಡ್ರೆ ಅವರು ಅಜಾತಶತ್ರುವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಹೈದ್ರಾಬಾದ್ ಕರ್ನಾಟಕ ವಿಮೋಚನೆ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಅವರು, ಶಾಸಕರಾಗಿ, ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ ಹಾಗೂ ಸಭಾನಾಯಕರಾಗಿ ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು.

ಅವರು ನಿಷ್ಠುರವಾದಿಯಾಗಿದ್ದು, ಅನ್ಯಾಯ ಕಂಡಾಗ ಸ್ವಪಕ್ಷ–ವಿಪಕ್ಷ, ತಮ್ಮವರು–ಅನ್ಯರು ಎಂಬ ಭೇದವಿಲ್ಲದೆ ಧ್ವನಿ ಎತ್ತುತ್ತಿದ್ದರು. ಅಸಹಾಯಕರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸದಾ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು. ರೈತರಿಗೆ ಬೆಳೆ ನಷ್ಟವಾದಾಗ ಅಥವಾ ಪ್ರಕೃತಿ ವಿಕೋಪಗಳಿಂದ ಹಾನಿ ಸಂಭವಿಸಿದಾಗ, ಸರ್ಕಾರದ ವಿರುದ್ಧವೇ ಹೋರಾಟ ನಡೆಸಿ ಪರಿಹಾರ ಒದಗಿಸಿದ್ದರು ಎಂದು ವಿವರಿಸಿದರು.

ಶರಣರ ಕುರಿತು ಸಮಾಜದ ಭಾವನೆಗೆ ಧಕ್ಕೆ ತರುವಂತೆ ತಿರುಚಿ ಬರೆಯಲ್ಪಟ್ಟ ಕೃತಿಗಳ ವಿರುದ್ಧ ಹೋರಾಟ ನಡೆಸಿ ಅವುಗಳನ್ನು ಮುಟ್ಟುಗೋಲು ಹಾಕಿಸಿದ ಧೈರ್ಯವೂ ಅವರದ್ದೇ. ಹಾವನೂರು ಆಯೋಗದ ವರದಿಯ ವಿರುದ್ಧ ಸದನದ ಒಳಗೂ ಹೊರಗೂ ಹೋರಾಟ ನಡೆಸಿದ್ದ ಅವರ ಬದ್ಧತೆ, ನ್ಯಾಯಪರತೆ ಹಾಗೂ ಬಡಜನರ ಪರ ಕಾಳಜಿ ಎಲ್ಲರಿಗೂ ಆದರ್ಶವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಜಿಲ್ಲೆಯಲ್ಲಿ ಜಾರಿಗೆ ಬಂದಿರುವ ನೀರಾವರಿ ಯೋಜನೆಗಳು ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಗಳಲ್ಲಿ ಭೀಮಣ್ಣ ಖಂಡ್ರೆ ಅವರ ಶ್ರಮ ಅಡಕವಾಗಿದೆ. ಇದೇ ಕಾರಣಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೇವರು ಅವರಿಗೆ ‘ಲೋಕನಾಯಕ’ ಎಂಬ ಬಿರುದನ್ನು ನೀಡಿದ್ದರು ಎಂದು ತಿಳಿಸಿದರು.

ಭೀಮಣ್ಣ ಖಂಡ್ರೆ ಅವರು ಛಲವಾದಿಯಾಗಿದ್ದು, “ಛಲಬೇಕು ಶರಣಂಗೆ” ಎಂಬ ಮಾತಿಗೆ ಜೀವಂತ ಉದಾಹರಣೆಯಾಗಿದ್ದರು. ಅವರು ಗುಡುಗಿದರೆ ವಿಧಾನಸೌಧವೇ ನಡುಗುತ್ತಿತ್ತು. ಅನ್ಯಾಯದ ವಿರುದ್ಧ ಸದಾ ಸಿಡಿದು ನಿಂತು ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದರು ಎಂದು ಈಶ್ವರ ಖಂಡ್ರೆ ಸ್ಮರಿಸಿದರು.

ಚನ್ನಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಹೆಣ್ಣು ಮಕ್ಕಳ ಉನ್ನತ ಶಿಕ್ಷಣ, ಹಿಂದುಳಿದ ಬೀದರ್ ಭಾಗದ ಯುವಜನರಿಗೆ ಎಂಜಿನಿಯರಿಂಗ್ ಶಿಕ್ಷಣ ದೊರಕಿಸುವಲ್ಲಿ ಅವರ ಶ್ರಮ ಅಪರಿಮಿತವಾಗಿದೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಸ್ವಂತ ಕಚೇರಿ ಕೂಡ ಇರದ ಸಂದರ್ಭದಲ್ಲಿ, ಬೆಂಗಳೂರು ನಗರದ ಹೃದಯ ಭಾಗದಲ್ಲಿ ಭೂಮಿ ಖರೀದಿಸಿ ಭವ್ಯ ಕಟ್ಟಡ ನಿರ್ಮಿಸಿ, ಸಮಾಜವನ್ನು ಸಂಘಟಿಸಿ ಗಟ್ಟಿಗೊಳಿಸಿದ ಕೀರ್ತಿಯೂ ಭೀಮಣ್ಣ ಖಂಡ್ರೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande