ವಿಬಿ ಗ್ರಾಮ ಜಿ ಕಾನೂನಿಗೆ ವಿರುದ್ಧ ಹೋರಾಟ : ಎಚ್.ಕೆ. ಪಾಟೀಲ್
ಗದಗ, 15 ಜನವರಿ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ “ಮನರೇಗಾ ಉಳಿಸಿ” ಅಭಿಯಾನದ ಅಂಗವಾಗಿ ಗದಗ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಗ್ರಾಮ ಜಿ ಕಾನ
ಫೋಟೋ


ಗದಗ, 15 ಜನವರಿ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ “ಮನರೇಗಾ ಉಳಿಸಿ” ಅಭಿಯಾನದ ಅಂಗವಾಗಿ ಗದಗ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಗ್ರಾಮ ಜಿ ಕಾನೂನಿನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಾತನಾಡಿದ ಅವರು, ಮಹಾತ್ಮಾ ಗಾಂಧಿ ನರೇಗಾ ಕಾನೂನು ಕೇವಲ ಹೆಸರಿನ ಯೋಜನೆ ಅಲ್ಲ, ಅದು ದೇಶದ ಕೃಷಿ ಕಾರ್ಮಿಕರು, ಸಣ್ಣ ರೈತರು ಮತ್ತು ಗ್ರಾಮೀಣ ಬಡವರಿಗೆ ಕೆಲಸದ ಹಕ್ಕು ನೀಡಿದ ಮಹತ್ವದ ಕಾನೂನು ಎಂದು ಹೇಳಿದರು. ಆದರೆ ಕೇಂದ್ರ ಸರ್ಕಾರ ನರೇಗಾ ಕಾನೂನನ್ನು ರದ್ದು ಮಾಡಿ ವಿಬಿ ಗ್ರಾಮ ಜಿ ಕಾನೂನು ಜಾರಿಗೆ ತರುವ ಮೂಲಕ ಬಡವರ ಕೈಯಿಂದ ಕೆಲಸದ ಹಕ್ಕನ್ನೇ ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ವಿಬಿ ಗ್ರಾಮ ಜಿ ಕಾನೂನು ಬಡವರ ವಿರೋಧಿ ಕಾನೂನಾಗಿದ್ದು, ಇದನ್ನು ರಾಜಕೀಯ ನಾಟಕದಂತೆ ಜಾರಿಗೆ ತರಲಾಗಿದೆ. ಮಹಾತ್ಮಾ ಗಾಂಧಿ ನಮ್ಮ ರಾಷ್ಟ್ರಪಿತರು. ಅವರ ಹೆಸರನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.

ಜಗತ್ತಿನ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಗಾಂಧೀಜಿ ಮೂರ್ತಿಗಳನ್ನು ಸ್ಥಾಪಿಸಲಾಗುತ್ತಿದೆ. ಆದರೆ ಅವರ ಹೆಸರನ್ನೇ ಕಾನೂನಿನಿಂದ ತೆಗೆದುಹಾಕುವ ಕುಕೃತ್ಯ ನಡೆದಿದೆ ಎಂದು ಕಿಡಿಕಾರಿದರು.

ಈ ಕಾನೂನಿನ ವಿರುದ್ಧ ವಿಶೇಷ ಅಧಿವೇಶನ ಕರೆಯಬೇಕು. ಜಂಟಿ ಅಧಿವೇಶನದ ಮೂಲಕ ಚರ್ಚೆ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮಹಾತ್ಮಾ ಗಾಂಧಿ ನರೇಗಾ ಕಾನೂನು ಪುನಃ ಜಾರಿಗೆ ಬರುವವರೆಗೂ ಕಾಂಗ್ರೆಸ್ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ನಾಯಕರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದಾರೆ ಎಂದರು.

ರಾಜ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಈ ಚಳುವಳಿಯನ್ನು ಗಟ್ಟಿಯಾಗಿ ನಡೆಸಲು ಸಿದ್ಧರಾಗಿದ್ದಾರೆ. ಗದಗ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ವಿಬಿ ಗ್ರಾಮ ಜಿ ಕಾನೂನಿನ ವಿರುದ್ಧ ಹೋರಾಟ ನಡೆಸಲಾಗುವುದು. ವಿಕೇಂದ್ರೀಕರಣದ ಬದಲು ಕೇಂದ್ರಿಕರಣ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ತಮ್ಮ ಹೊಲ, ಊರು ಅಭಿವೃದ್ಧಿಪಡಿಸುವ ಕೆಲಸ ಬಿಟ್ಟು ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆ ಬಡವರನ್ನು ಬಳಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಅದಾನಿ–ಅಂಬಾನಿ ಕೈಯಲ್ಲಿ ಬಡವರನ್ನು ಕೆಲಸ ಮಾಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಸಹಿಸುವುದಿಲ್ಲ. ವಿಬಿ ಗ್ರಾಮ ಜಿ ಕಾನೂನು ಬಡವರಿಗೆ ತಕ್ಕ ಪಾಠ ಕಲಿಸುವ ಹೋರಾಟಕ್ಕೆ ಕಾರಣವಾಗಲಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande