
ಗದಗ, 15 ಜನವರಿ (ಹಿ.ಸ.) :
ಆ್ಯಂಕರ್ : ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪೂರ್ಣ ಪ್ರಮಾಣದ ಉತ್ಖನನ ಕಾರ್ಯವನ್ನು ನಾಳೆಯಿಂದ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಹಾಗೂ ತಜ್ಞರು ತಿಳಿಸಿದ್ದಾರೆ. ಉತ್ಖನನ ಕಾರ್ಯ ಯಶಸ್ವಿಯಾಗಲು ಬಿಸಿಲು ಅಗತ್ಯವಾಗಿದ್ದು, ಮಳೆಯಿದ್ದಲ್ಲಿ ಕಾರ್ಯಕ್ಕೆ ಅಡಚಣೆ ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಉತ್ಖನನ ಕಾರ್ಯಕ್ಕೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ವಿಶೇಷ ತಜ್ಞರ ತಂಡವನ್ನು ನೇಮಕ ಮಾಡಲಾಗಿದೆ. ಪುರಾತತ್ವ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ತಜ್ಞರ ಮೇಲ್ವಿಚಾರಣೆಯಲ್ಲಿ ಕಾರ್ಯ ನಡೆಯಲಿದೆ ಎಂದು ತಿಳಿಸಲಾಗಿದೆ.
ಲಕ್ಕುಂಡಿ ನಮ್ಮ ಜಿಲ್ಲೆಯ ಅತ್ಯಂತ ವಿಶೇಷ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ 101 ದೇವಸ್ಥಾನಗಳು ಮತ್ತು 101 ಬಾವಿಗಳು ಇದ್ದು, ರಾಷ್ಟ್ರಕೂಟ, ಚಾಲುಕ್ಯರ ಕಾಲದ ಸಮೃದ್ಧ ಇತಿಹಾಸವನ್ನು ತನ್ನೊಳಗೆ ಹೊಂದಿದೆ. ಲಕ್ಕುಂಡಿಯ ಇತಿಹಾಸವನ್ನು ಕೆಲವರು ಒಪ್ಪಿಕೊಂಡಿದ್ದರೆ, ಇನ್ನೂ ಕೆಲವರು ಒಪ್ಪಿಕೊಳ್ಳದಿರುವ ಹಿನ್ನೆಲೆ ಇದೆ. ಆದರೆ ಉತ್ಖನನದ ಮೂಲಕ ಲಕ್ಕುಂಡಿಯ ಐತಿಹಾಸಿಕ ಮಹತ್ವ ಮತ್ತಷ್ಟು ಸ್ಪಷ್ಟವಾಗಲಿದೆ ಎಂಬ ವಿಶ್ವಾಸವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಹಿಂದೆ ಮಳೆಯ ಸಮಯದಲ್ಲಿ ಸ್ವಲ್ಪಮಟ್ಟಿಗೆ ಬಂಗಾರ, ಮುತ್ತು, ಹವಳ ಹಾಗೂ ರತ್ನಗಳು ಸಿಕ್ಕಿರುವ ಮಾಹಿತಿ ಇದೆ. ಇದು ಲಕ್ಕುಂಡಿ ಗ್ರಾಮದ ವಿಶೇಷ ಸಂಪತ್ತಿನ ಸಂಕೇತವಾಗಿದೆ. ಆದರೂ ಲಕ್ಕುಂಡಿಯ ನಿಜವಾದ ಸಂಪತ್ತು ನಿಧಿಗಿಂತಲೂ ಹೆಚ್ಚಾಗಿ ಇಲ್ಲಿ ಅಡಗಿರುವ ಕಲಾಕೃತಿ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯಲ್ಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಸಹ್ಯಾದ್ರಿ ಬೆಟ್ಟಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳಾಗಿ ಗುರುತಿಸಿಕೊಂಡಿರುವಂತೆ, ಲಕ್ಕುಂಡಿ ಗ್ರಾಮವನ್ನೂ ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸುವ ದಿಕ್ಕಿನಲ್ಲಿ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಉತ್ಖನನ ಕಾರ್ಯವು ಆ ಪ್ರಯತ್ನಕ್ಕೆ ಮಹತ್ವದ ದಾಖಲೆಗಳನ್ನೂ ಪುರಾವೆಗಳನ್ನೂ ಒದಗಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಉತ್ಖನನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಕುಂಡಿಯ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗೆ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದ ಗಮನ ಸೆಳೆಯುವ ಸಾಧ್ಯತೆ ಹೆಚ್ಚಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP