
ನವದೆಹಲಿ, 13 ಜನವರಿ (ಹಿ.ಸ.);
ಆ್ಯಂಕರ್:
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ಜ್ಞಾನ ಶಕ್ತಿಯನ್ನು ಇನ್ನಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಮಂಗಳವಾರ ನಡೆದ ಐಐಎಸ್ಇಅರ್ ಸ್ಥಾಯಿ ಸಮಿತಿಯ ಮೂರನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಎಲ್ಲಾ ಏಳು ಐಐಎಸ್ಇಅರ್ ಗಳ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಪರಿಶೀಲಿಸಿ, ಭವಿಷ್ಯದ ಕಾರ್ಯತಂತ್ರಗಳ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಐಐಎಸ್ಇಅರ್ ಗಳು ಭಾರತದ ಉನ್ನತ ಶಿಕ್ಷಣದ “ಕಿರೀಟದಲ್ಲಿರುವ ರತ್ನಗಳು” ಎಂದು ಅವರು ವರ್ಣಿಸಿದರು.
ವಿದ್ಯಾರ್ಥಿ ಕೇಂದ್ರಿತ ವಿಧಾನ, ಫಲಿತಾಂಶಾಧಾರಿತ ಹಾಗೂ ಸಾಮಾಜಿಕವಾಗಿ ಪ್ರಸ್ತುತವಾದ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಪ್ರಧಾನ್ ಹೇಳಿದರು. ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆಯನ್ನು ಸಾಧಿಸಲು ಹಾಗೂ ವಿದ್ಯಾರ್ಥಿ ಅನುಭವವನ್ನು ಉನ್ನತಗೊಳಿಸಲು ಸ್ಪಷ್ಟ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ ಎಂದರು.
ಸಭೆಯಲ್ಲಿ “ಐ-ಫ್ಲೆಕ್ಸ್” ಚೌಕಟ್ಟಿನ ಜಾರಿಗೆ ಒಪ್ಪಿಗೆ ನೀಡಲಾಗಿದ್ದು, ಶೈಕ್ಷಣಿಕ ನಮ್ಯತೆ ಹೆಚ್ಚಿಸುವುದು, ಪಿಎಚ್‌ಡಿ ಕಾರ್ಯಕ್ರಮ ಸುಧಾರಣೆ, ಪ್ರತಿ ಐಐಎಸ್ಇಅರ್ ನಲ್ಲಿ ಸಂಶೋಧನಾ ಉದ್ಯಾನವನಗಳು ಮತ್ತು ಇನ್ಕ್ಯುಬೇಟರ್‌ಗಳ ಸ್ಥಾಪನೆ, ಹಾಗೂ ನಿರ್ದಿಷ್ಟ ಕ್ಷೇತ್ರಗಳಲ್ಲಿ ಶ್ರೇಷ್ಠತೆಯ ಕೇಂದ್ರಗಳ ರಚನೆ ಕುರಿತು ನಿರ್ಣಯಿಸಲಾಯಿತು. ಉದ್ಯಮ–ಸಂಶೋಧನಾ ಸಹಕಾರಕ್ಕಾಗಿ ಪ್ರತಿ ಐಐಎಸ್ಇಅರ್ ನಲ್ಲಿ ಸೆಕ್ಷನ್ 8 ಕಂಪನಿ ಸ್ಥಾಪನೆಗೂ ತೀರ್ಮಾನಿಸಲಾಗಿದೆ.
ಅಂತರರಾಷ್ಟ್ರೀಯ ಒಲಿಂಪಿಯಾಡ್ ವಿದ್ಯಾರ್ಥಿಗಳಿಗೆ ವಿಶೇಷ ಪ್ರವೇಶ ವ್ಯವಸ್ಥೆ, ಪದವಿಪೂರ್ವ ಹಂತದಲ್ಲಿ ಕ್ರೀಡಾ ಕೋಟಾ ಪರಿಚಯ, ಹಾಗೂ ಭಾರತೀಯ ಭಾಷಾ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ಐಐಎಸ್ಇಅರ್ ಗಳ 5 ಮತ್ತು 10 ವರ್ಷದ ದೃಷ್ಟಿ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದ್ದು, ಶೈಕ್ಷಣಿಕ, ಸಂಶೋಧನೆ ಮತ್ತು ನಾವೀನ್ಯತೆ ಸಹಯೋಗಗಳನ್ನು ಬಲಪಡಿಸುವ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa