

ಗದಗ, 12 ಜನವರಿ (ಹಿ.ಸ.) :
ಆ್ಯಂಕರ್ : ಐತಿಹಾಸಿಕ ಹಿನ್ನೆಲೆಯ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ಪತ್ತೆಯಾದ 466 ಗ್ರಾಂ ಚಿನ್ನಾಭರಣ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಮೊದಲಿಗೆ ‘ನಿಧಿ ಪತ್ತೆ’ ಎಂದು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸುದ್ದಿ ಸದ್ದು ಮಾಡಿದ್ದ ಈ ಪ್ರಕರಣ, ಇದೀಗ ಕುಟುಂಬಸ್ಥರ ಯು-ಟರ್ನ್‌ನಿಂದ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಲಕ್ಕುಂಡಿ ಗ್ರಾಮದ ಕಸ್ತೂರವ್ವ ಬಸವರಾಜ್ ರಿತ್ತಿ ಎಂಬ ಮಹಿಳೆಯ ಮನೆಗೆ ಅಡಿಪಾಯ ಹಾಕುವ ಸಂದರ್ಭದಲ್ಲಿ ಭೂಮಿಯೊಳಗೆ ಚಿನ್ನಾಭರಣಗಳು ಪತ್ತೆಯಾಗಿದ್ದವು.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಪ್ರಾಮಾಣಿಕತೆಯಿಂದ 466 ಗ್ರಾಂ ಚಿನ್ನಾಭರಣವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದರು. ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ನಡುವೆ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಅವರು, ಪತ್ತೆಯಾದ ಚಿನ್ನಾಭರಣವು ನಿಧಿಯಲ್ಲ, ಅದು ಕುಟುಂಬದ ಪೂರ್ವಜರ ಕಾಲದ ಆಭರಣವಾಗಿರಬಹುದೆಂಬ ಪ್ರಾಥಮಿಕ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಡುಗೆ ಮನೆಯಲ್ಲಿ ಹೂತು ಇಟ್ಟಿರುವ ರೀತಿಯಲ್ಲೇ ಚಿನ್ನಾಭರಣ ಪತ್ತೆಯಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು.
ಈ ಹೇಳಿಕೆಯ ನಂತರ ‘ನಿಧಿಯಲ್ಲ ಅಂದ್ರೆ ಇದು ನಮ್ಮ ಪೂರ್ವಜರ ಆಸ್ತಿ, ನಮಗೆ ವಾಪಸ್ ಕೊಡಬೇಕು’ ಎಂದು ಕುಟುಂಬಸ್ಥರು ಆಗ್ರಹಿಸಿದ್ದರು.
ಆದರೆ ಇದೀಗ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಕಸ್ತೂರವ್ವ ಕುಟುಂಬ ಸಂಪೂರ್ಣ ಯು-ಟರ್ನ್ ಹೊಡೆದಿದೆ. “ನಮಗೆ ನಿಧಿಯೂ ಬೇಡ, ಚಿನ್ನಾಭರಣವೂ ಬೇಡ, ಆ ಜಾಗವೂ ಬೇಡ. ಸರ್ಕಾರವೇ ಬೇರೆ ಕಡೆ ಮನೆ ಕಟ್ಟಿಕೊಡಬೇಕು. ಮಗ ಪ್ರಜ್ವಲ್‌ಗೆ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡಬೇಕು ಹಾಗೂ ಉದ್ಯೋಗ ವ್ಯವಸ್ಥೆ ಮಾಡಿಕೊಡಬೇಕು” ಎಂದು ಕುಟುಂಬಸ್ಥರು ಅಧಿಕಾರಿಗಳ ಮುಂದೆ ಆಗ್ರಹಿಸಿದ್ದಾರೆ.
ನಿಧಿ ಪತ್ತೆಯ ವಿಚಾರ ಚರ್ಚೆಯಾಗುತ್ತಿದ್ದಂತೆ ಲಕ್ಕುಂಡಿ ಗ್ರಾಮಕ್ಕೆ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ನಿರ್ದೇಶಕ ಶೆಜೇಶ್ವರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, “ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ. ಪರಿಶೀಲನೆ ಪೂರ್ಣಗೊಂಡ ನಂತರ ಮನೆ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತದೆ. ಕಾನೂನು ಪ್ರಕಾರ ಭೂಮಿಯೊಳಗೆ ಸಿಕ್ಕ ನಿಧಿ ಸರ್ಕಾರದ ಆಸ್ತಿಯಾಗುತ್ತದೆ. ಆದರೂ ನಿಯಮಾನುಸಾರ 1/5ನೇ ಭಾಗದಷ್ಟು ಪರಿಹಾರವನ್ನು ಕುಟುಂಬಕ್ಕೆ ನೀಡಲಾಗುತ್ತದೆ. ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಇದೇ ವೇಳೆ ನರಗುಂದ ಶಾಸಕ ಸಿ.ಸಿ. ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಸ್ತೂರವ್ವ ಕುಟುಂಬವನ್ನು ಸನ್ಮಾನಿಸಿ ಗೌರವಿಸಿದರು.
“ಇಷ್ಟೊಂದು ಚಿನ್ನದ ಮೌಲ್ಯ ಇರುವಾಗಲೂ ಕುಟುಂಬ ಪ್ರಾಮಾಣಿಕತೆಯಿಂದ ಸರ್ಕಾರಕ್ಕೆ ಹಸ್ತಾಂತರಿಸಿದೆ. ಅವರಿಗೆ ನಾನು ನಮನ ಸಲ್ಲಿಸುತ್ತೇನೆ. ಈ ಕುಟುಂಬಕ್ಕೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಒದಗಿಸುವ ಕೆಲಸ ಮಾಡುತ್ತೇನೆ. ಕುಟುಂಬ ನೆಮ್ಮದಿಯ ಜೀವನ ನಡೆಸಲು ಅಗತ್ಯವಿರುವ ಎಲ್ಲ ಸಹಾಯ ಮಾಡಲಾಗುತ್ತದೆ” ಎಂದು ಅವರು ಹೇಳಿದರು.
ಇನ್ನು ಮೂರು ದಿನಗಳ ಕಾಲ ಸ್ಥಳಕ್ಕೆ ಭೇಟಿ ನೀಡದ ಜಿಲ್ಲಾಧಿಕಾರಿಗಳ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾನೂನು ಪ್ರಕಾರ ಕುಟುಂಬಕ್ಕೆ ದೊರೆಯಬೇಕಾದ ಪರಿಹಾರವನ್ನು ನೀಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಲಕ್ಕುಂಡಿಯಲ್ಲಿ ಪತ್ತೆಯಾದ 466 ಗ್ರಾಂ ಚಿನ್ನಾಭರಣ ಯಾರಿಗೆ ಸೇರಿದ್ದು, ಅದು ಯಾವ ಕಾಲಘಟ್ಟಕ್ಕೆ ಸಂಬಂಧಿಸಿದೆ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಅಂತಿಮ ವರದಿ ಹಾಗೂ ಸರ್ಕಾರ ಕುಟುಂಬಕ್ಕೆ ನೀಡಲಿರುವ ಸಹಾಯ ಯಾವ ರೂಪದಲ್ಲಿ ಇರಲಿದೆ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP