
ಕೋಲಾರ, ೧೦ ಜನವರಿ (ಹಿ.ಸ) :
ಆ್ಯಂಕರ್ : ಲಾಭದಲ್ಲಿದ್ದ ಕೈಗಾರಿಕೆಯನ್ನು ಮುಚ್ಚಿದ್ದರಿಂದ ಕೆಲಸ ಕಳೆದುಕೊಂಡಿರುವ ೮೧ ಕಾರ್ಮಿಕರಿಗೆ ಕೆಲಸ ನೀಡಲು ಒತ್ತಾಯಿಸಿ ಮಾಲೂರಿನಿಂದ ಬೆಂಗಳೂರಿಗೆ ಶಾಂತಿಯುತವಾಗಿ ಪಾದಯಾತ್ರೆ ಮಾಡುತ್ತಿದ್ದ ಕಾರ್ಮಿಕರನ್ನು ಹೊಸಕೋಟೆ ಬಳಿ ಬಂಧಿಸಿರುವುದನ್ನು ಸಿಐಟಿಯು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಮಾಲೂರು ಕೈಗಾರಿಕಾ ಪ್ರಾಂಗಣದಲ್ಲಿರುವ ವೆರ್ಗಾ ಅಟ್ಯಾಚ್‌ಮೆಂಟ್ ಲಿಮಿಟೆಡ್ ಕೈಗಾರಿಕೆಯು ಲಾಭದಾಯಕವಾಗಿ ನಡೆಯುತ್ತಿದ್ದರೂ, ಕೈಗಾರಿಕೆಯು ನಷ್ಠದಲ್ಲಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಕೈಗಾರಿಕೆಯನ್ನು ಮುಚ್ಚಿದ್ದರಿಂದ ೮೧ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.
ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರಿಗೆ ಕೆಲಸ ನೀಡುವಂತೆ ಒತ್ತಾಯಿಸಿ ೨೧ ಆಗಸ್ಟ್ ೨೦೨೫ ರಿಂದ ಅಂದರೆ ಅಂದಾಜು ೧೪೨ ದಿನಗಳಿಂದ ಕೈಗಾರಿಕೆಯ ಮುಂಭಾಗದಲ್ಲಿ ಶಾಂತಿಯುತವಾಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ, ಬೇಡಿಕೆಗಳನ್ನು ಈಡೇರಿಸಲು ಯಾವುದೇ ಕೈಗೊಂಡಿಲ್ಲ.
ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನುಗಳನ್ನು ನಿರಂತರವಾಗಿ ಉಲ್ಲಂಘನೆ ಮಾಡಿ, ಕಾರ್ಮಿಕರಿಗೆ ವಿನಾಕಾರಣ ತೊಂದರೆ ನೀಡುತ್ತಿರುವ ಮಾಲೀಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮೌನವಾಗಿರುವುದು ಸರಿಯಲ್ಲ. ೮೧ ಕಾರ್ಮಿಕರಿಗೆ ಕಾಯಂ ಕೆಲಸ ನೀಡಬೇಕು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮಾಲೂರಿನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಹೋಗುತ್ತಿದ್ದ ಕಾರ್ಮಿಕರನ್ನು ವಿನಾಕಾರಣ ಬಂಧಿಸಿರುವುದು ಖಂಡನೀಯ.
ಕಾರ್ಮಿಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಪಿ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಆಗ್ರಹಿಸಿದ್ದಾರೆ.
ಚಿತ್ರ : ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೆರ್ಗಾ ಅಟ್ಯಾಚ್‌ಮೆಂಟ್ ಲಿಮಿಟೆಡ್ ಕೈಗಾರಿಕೆಯ ಮುಂದೆ ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್