
ಗದಗ, 10 ಜನವರಿ (ಹಿ.ಸ.)
ಆ್ಯಂಕರ್:
ರಾಜ ಮಹಾರಾಜರ ಆಳ್ವಿಕೆಯ ಇತಿಹಾಸ ಹೊಂದಿರುವ, ನೂರಾರು ಪುರಾತನ ದೇವಸ್ಥಾನಗಳಿಗಾಗಿ ಖ್ಯಾತಿಯಾಗಿರುವ ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ನಿಧಿ ಪತ್ತೆಯಾಗಿರುವ ಘಟನೆ ಸಂಚಲನ ಮೂಡಿಸಿದೆ.
ಲಕ್ಕುಂಡಿ ಗ್ರಾಮದ ಗಂಗವ್ವ ರಿತ್ತಿ ಕುಟುಂಬ ಮನೆ ಕಟ್ಟಡ ನಿರ್ಮಾಣಕ್ಕಾಗಿ ತಳಪಾಯ ತೆಗೆಯುವ ವೇಳೆ ಒಂದು ತಾಮ್ರದ ಮಡಿಕೆಯಲ್ಲಿ ಪುರಾತನ ಕಾಲದ ಚಿನ್ನದ ಆಭರಣಗಳು ಪತ್ತೆಯಾಗಿದ್ದು, ಒಟ್ಟು 466 ಗ್ರಾಂ ತೂಕದ 22 ವಿವಿಧ ಚಿನ್ನದ ಆಭರಣಗಳು ಸಿಕ್ಕಿವೆ.
ಗಂಗವ್ವ ರಿತ್ತಿ ಹಾಗೂ ಬಸವರಾಜ್ ರಿತ್ತಿ ಕುಟುಂಬಸ್ಥರು ತಕ್ಷಣವೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಮಾಹಿತಿ ಪಡೆದ ಲಕ್ಕುಂಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಿಧಿ ಪತ್ತೆಯ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಭದ್ರತಾ ದೃಷ್ಟಿಯಿಂದ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.
ನಂತರ ಸ್ಥಳಕ್ಕೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ದುರ್ಗೆಶ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪತ್ತೆಯಾದ ಮಡಿಕೆಯನ್ನು ತೆರದು ಪರಿಶೀಲಿಸಲು ಅಕ್ಕಸಾಲಿಗರನ್ನು ಕರೆಯಿಸಿ, ಒಂದು ಗಂಟೆಗೂ ಹೆಚ್ಚು ಕಾಲ ಚಿನ್ನದ ಆಭರಣಗಳ ಪರಿಶೀಲನೆ ಮತ್ತು ತೂಕ ಮಾಡಲಾಯಿತು.
ಪರಿಶೀಲನೆಯ ವೇಳೆ ಪುರಾತನ ವಿನ್ಯಾಸದ 22 ಬಗೆಯ ಚಿನ್ನದ ಆಭರಣಗಳು ಪತ್ತೆಯಾಗಿದ್ದು, ಒಟ್ಟು ತೂಕ 466 ಗ್ರಾಂ ಆಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.
ಪ್ರಾಥಮಿಕ ಅಂದಾಜಿನ ಪ್ರಕಾರ ಈ ಚಿನ್ನದ ಆಭರಣಗಳ ಮೌಲ್ಯ ಸುಮಾರು 65 ರಿಂದ 70 ಲಕ್ಷ ರೂಪಾಯಿ ಇರಬಹುದು ಎಂದು ಹೇಳಲಾಗಿದೆ. ಪುರಾತನ ಕಾಲದ ಆಭರಣಗಳಾಗಿರುವುದರಿಂದ ಇವುಗಳಿಗೆ ಐತಿಹಾಸಿಕ ಹಾಗೂ ಪುರಾತತ್ವ ಮಹತ್ವವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಚರ ಸಮ್ಮುಖದಲ್ಲಿ ರಿತ್ತಿ ಕುಟುಂಬಸ್ಥರು ಪತ್ತೆಯಾದ ಚಿನ್ನವನ್ನು ಜಿಲ್ಲಾಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರಿಸಿದ್ದು, ನಂತರ ಜಿಲ್ಲಾಡಳಿತ ಖಜಾನೆಗೆ ಒಪ್ಪಿಸಲಾಗಿದೆ.
ನಿಧಿ ಪತ್ತೆಯಾದರೂ ಯಾವುದೇ ಗೊಂದಲ ಅಥವಾ ಅಕ್ರಮ ನಡೆಯದಂತೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಸರ್ಕಾರಕ್ಕೆ ಹಸ್ತಾಂತರಿಸಿದ ಬಸವರಾಜ್ ಹಾಗೂ ಗಂಗವ್ವ ರಿತ್ತಿ ಕುಟುಂಬದ ನಡೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಇಂತಹ ಪ್ರಾಮಾಣಿಕತೆ ಸಮಾಜಕ್ಕೆ ಮಾದರಿ” ಎಂದು ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ಈ ಘಟನೆ ಗ್ರಾಮಸ್ಥರಲ್ಲೂ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಪುರಾತತ್ವ ತಜ್ಞರಿಂದ ಆಭರಣಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಲಕ್ಕುಂಡಿಯ ಇತಿಹಾಸಕ್ಕೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗಿದ್ದು, ಪ್ರಾಮಾಣಿಕತೆಯಿಂದ ಸರ್ಕಾರಕ್ಕೆ ನಿಧಿ ಹಸ್ತಾಂತರವಾದುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP