
ನವದೆಹಲಿ, 10 ಜನವರಿ (ಹಿ.ಸ.) :
ಆ್ಯಂಕರ್ : ಭಾರತದ ಶುದ್ಧ ಇಂಧನ ಪರಿವರ್ತನೆ 2025ರಲ್ಲಿ ಇತಿಹಾಸಾತ್ಮಕ ಸಾಧನೆ ದಾಖಲಿಸಿದ್ದು, ಈ ವರ್ಷ ಶುದ್ಧ ಇಂಧನ ಸಾಮರ್ಥ್ಯದಲ್ಲಿ ದಾಖಲೆಯ ಬೆಳವಣಿಗೆ ಕಂಡಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 2025ರ ಅಂತ್ಯದ ವೇಳೆಗೆ ದೇಶದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 266.78 ಗಿಗಾವಾಟ್ ಗೆ ಏರಿಕೆಯಾಗಿದೆ. ಇದು 2024ರ ಹೋಲಿಕೆಯಲ್ಲಿ 22.6 ಶೇಕಡಾ ಹೆಚ್ಚಳವಾಗಿದೆ ಎಂಬುದು ಗಮನಾರ್ಹ.
ಶುದ್ಧ ಇಂಧನ ವಿಸ್ತರಣೆಯಲ್ಲಿ ಸೌರಶಕ್ತಿ ಪ್ರಮುಖ ಪಾತ್ರ ವಹಿಸಿದ್ದು, 38.8 ಶೇಕಡಾ ಬೆಳವಣಿಗೆಯೊಂದಿಗೆ 135.81 GW ಸಾಮರ್ಥ್ಯಕ್ಕೆ ಜಿಗಿದಿದೆ. ಅದೇ ವೇಳೆ, ಪವನಶಕ್ತಿ ಕ್ಷೇತ್ರವೂ 13.2 ಶೇಕಡಾ ಹೆಚ್ಚಳದೊಂದಿಗೆ 54.51 GW ಸಾಮರ್ಥ್ಯವನ್ನು ತಲುಪಿದೆ.
ಈ ಸಾಧನೆಗಳು ಭಾರತದಲ್ಲಿ ಶುದ್ಧ ಇಂಧನ ಪರಿವರ್ತನೆಗೆ ನೀಡಲಾಗುತ್ತಿರುವ ಸ್ಪಷ್ಟ ನೀತಿ ನಿರ್ದೇಶನ, ದೀರ್ಘಕಾಲೀನ ದೃಷ್ಟಿಕೋನ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದಡಿ, ಇಂಧನ ಸುರಕ್ಷತೆ, ಹವಾಮಾನ ಜವಾಬ್ದಾರಿ ಮತ್ತು ಸ್ವಾವಲಂಬಿ ಹಸಿರು ಆರ್ಥಿಕತೆಯತ್ತ ಭಾರತ ದ್ರುತಗತಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಜಾಗತಿಕ ಮಟ್ಟದಲ್ಲಿ ಶುದ್ಧ ಇಂಧನದ ನಾಯಕತ್ವವನ್ನು ವಹಿಸುವ ದಿಕ್ಕಿನಲ್ಲಿ ಈ ಸಾಧನೆಗಳು ಮಹತ್ವದ ಮೈಲಿಗಲ್ಲುಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa