ಬೆಂಗಳೂರು, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್‌ಫೋಸಿಸ್‌ನ ಸ್ಪ್ರಿಂಗ್‌ಬೋರ್ಡ್ ಸಿಎಸ್‌ಆರ್ ಕಾರ್ಯಕ್ರಮದಡಿ ಸಹಭಾಗಿತ್ವಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರ ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡಿದೆ.
ಪತ್ರಕರ್ತರ ಸಾಫ್ಟ್‌ಸ್ಕಿಲ್ ತರಬೇತಿಯ ಉದ್ದೇಶಕ್ಕಾಗಿ ಮಾಡಿಕೊಳ್ಳುತ್ತಿರುವ ಈ ಒಡಂಬಡಿಕೆಯು ಸಿ.ಎಸ್.ಆರ್. ಅಡಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕೈಗೆತ್ತಿಕೊಂಡ ಮೊದಲ ಕಾರ್ಯಕ್ರಮವಾಗಿದೆ.
ಇನ್ಫೋಸಿಸ್ CSR ಯೋಜನೆಯ “ಸ್ಪ್ರಿಂಗ್‌ಬೋರ್ಡ್” ಪ್ಲಾಟ್‌ಫಾರ್ಮ್ ಮೂಲಕ ಪತ್ರಕರ್ತರ ಡಿಜಿಟಲ್ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ ಈ ಒಡಂಬಡಿಕೆಯ ಉದ್ದೇಶವಾಗಿದೆ.
“ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಭಾಗಿತ್ವವು ಬದಲಾಗುತ್ತಿರುವ ಹೊಸ ಮಾಧ್ಯಮಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ವಿನೂತನ ಪ್ಲಾಟ್‌ಫಾರಂ ಮಾಧ್ಯಮ ವೃತ್ತಿಪರರ ಕೌಶಲ್ಯ ಉನ್ನತೀಕರಣಕ್ಕೆ, ಅದರಲ್ಲೂ ವಿಶೇಷವಾಗಿ ಪತ್ರಕರ್ತರಿಗೆ ವೇಗವಾಗಿ ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ತಾಂತ್ರಿಕ ಪರಿಣತಿ ಹಾಗೂ ಸುದ್ದಿಯನ್ನು ಪ್ರಸ್ತುತಪಡಿಸುವ ಕೌಶಲವನ್ನು ಒದಗಿಸಲಿದೆ” ಎಂಬ ಆಶಯವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಆಯೇಶಾ ಖಾನಂ ಅವರು ವ್ಯಕ್ತಪಡಿಸಿದ್ದಾರೆ.
“ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಶಿಕ್ಷಣ ಕುರಿತ ಸಿಎಸ್‌ಆರ್ ಕಾರ್ಯಕ್ರಮವಾಗಿದೆ. ಇಂದು ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಮಾಧ್ಯಮ ಅಕಾಡೆಮಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಮಾಧ್ಯಮ ಅಕಾಡೆಮಿಗೆ ಸ್ಪ್ರಿಂಗ್‌ಬೋರ್ಡ್‌ನ ಡಿಜಿಟಲ್ ವಿಷಯಗಳಿಗೆ ಪ್ರವೇಶ ಲಭಿಸಲಿದೆ ಮತ್ತು ಅವರು ಸಾಫ್ಟ್ ಸ್ಕಿಲ್ ಗಳು, ವ್ಯಕ್ತಿತ್ವ ವಿಕಾಸ ಹಾಗೂ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಇತ್ತೀಚಿನ ತಂತ್ರಜ್ಞಾನಗಳ ಅವಲೋಕನ ಕುರಿತ ವಿಷಯಗಳಿಂದ ಪ್ರಯೋಜನ ಪಡೆಯಬಹುದು. ಇದು ವಿಶೇಷವಾಗಿ 2ನೇ ಹಾಗೂ 3ನೇ ಹಂತದ ನಗರಗಳ ಪತ್ರಕರ್ತರಿಗೆ ಖಂಡಿತವಾಗಿಯೂ ಸಹಾಯಕವಾಗಲಿದೆ” ಎಂದು ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ (ಇ ಟಿ ಎ) ಸತೀಶ ಬಿ. ನಂಜಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ.
ತರಬೇತಿ ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಕಾರ್ಯಕ್ರಮದಡಿ ಪತ್ರಕರ್ತರಿಗೆ ಮೂರು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಇದರಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಅಗತ್ಯ ಕೌಶಲ್ಯಗಳು, ಕೃತಕ ಬುದ್ಧಿಮತ್ತೆಯ ಬಳಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು. ಈ ವರ್ಷದಲ್ಲಿ ಒಟ್ಟು ಮೂರು ಕಾರ್ಯಕ್ರಮಗಳ ಮೂಲಕ ಒಟ್ಟು 150 ಪತ್ರಕರ್ತರಿಗೆ ತರಬೇತಿ ನೀಡಲು ಉದ್ದೇಶಿಸಿದೆ. ಇದರಲ್ಲಿ ವಿಶೇಷವಾಗಿ ಒಂದು ಬ್ಯಾಚ್‌ನಲ್ಲಿ ಮಹಿಳಾ ಆಯವ್ಯಯದಡಿ ಪತ್ರಕರ್ತೆಯರಿಗೆ ತರಬೇತಿ ನೀಡಲು ಉದ್ದೇಶಿಸಿದೆ. ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಈ ತರಬೇತಿಯಲ್ಲಿ ಆದ್ಯತೆ ನೀಡಲಾಗುವುದು.
ಇನ್ಫೋಸಿಸ್ ಸಂಸ್ಥೆಯು ಪ್ಲಾಟ್‌ಫಾರ್ಮ್ ಮತ್ತು ಪರಿಣತಿ ಒದಗಿಸಲಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರು ಹಾಗೂ ಶಿಕ್ಷಕರ ಭಾಗವಹಿಸುವಿಕೆ ಸಮನ್ವಯಗೊಳಿಸಲಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಉಪಕ್ರಮವಾಗಿದೆ.
ಹೆಚ್ಚು ಪತ್ರಕರ್ತರಿಗೆ ತರಬೇತಿ ನೀಡುವ ಆಶಯದೊಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯು ಮುಂದಡಿಯಿಟ್ಟಿದೆ.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಸದಸ್ಯ ಹೆಚ್.ವಿ. ಕಿರಣ್ ಇನ್‌ಫೋಸಿಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸತೀಶ ಬಿ. ನಂಜಪ್ಪ, ಹಿರಿಯ ಅಧಿಕಾರಿಗಳಾದ ಸಂತೋಷ್ ಅನಂತಪುರ, ಬಿಳಿಗಿರಿ ರಂಗ ಮೊದಲಾದವರು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / Rakesh Mahadevappa