ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಖಾದಿ ಬಟ್ಟೆ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಖಾದಿ ದೇಶಾಭಿಮಾನದ ಪ್ರತೀಕವಾಗಿದೆ. ಖಾದಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಮಸ್ಕಿ ಶಾಸಕರಾದ ಬಸನಗೌಡ ತುರವಿಹಾಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಇಂಡಿ ರಸ್ತೆಯ ಚಾಂದಿನಿ ಫಂಕ್ಷನ್ ಹಾಲ್‍ನಲ್ಲಿ ಸೆ.8 ರಿಂದ 17ರವರೆಗೆ ಆಯೋಜಿಸಿದ ಖಾದಿ ಉತ್ಸವ-2025ರ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಖಾದಿ ಉತ್ಪಾದನೆಗೆ ಇತಿಹಾಸವಿದೆ. ಖಾದಿ ನಮ್ಮ ಸ್ವಾಭಿಮಾನ-ಸ್ವಾವಲಂಬನೆಯ ಸಂಕೇತವಾಗಿದೆ. ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಖಾದಿ ಉತ್ಪಾದನೆ ಉತ್ತೇಜಿಸಲು ಇಂತಹ ಮಾರಾಟ ಮೇಳಗಳು ಸಹಕಾರಿಯಾಗಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮೇಳಗಳಲ್ಲಿ ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಖಾದಿ ಮಂಡಳಿಯು ಕಳೆದ 65 ವರ್ಷ ಮೇಲ್ಪಟ್ಟು ಖಾದಿ ಕ್ಷೇತ್ರವಾದ ಹತ್ತಿ, ರೇಷ್ಮೆ ನೂಲಿನಿಂದ ಚರಕದ ಮೂಲಕ ನೂಲು ತೆಗೆದು ಗ್ರಾಮೀಣರಿಂದ ವಸ್ತ್ರಗಳನ್ನು ಸಿದ್ಧಪಡಿಸಲು ಉತ್ತೇಜಿಸುತ್ತಾ ಬಂದಿದೆ. ಪ್ರಸ್ತುತ ಕರ್ನಾಟಕದಲ್ಲಿ 175ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಖಾದಿ ಉತ್ಪಾದನೆಯಲ್ಲಿ ತೊಡಗಿಕೊಂಡು ಉದ್ಯೋಗ ನೀಡುವತ್ತಲೂ ಸಹಕಾರಿಯಾಗಿದೆ. ಖಾದಿ ಬಟ್ಟೆ ಧರಿಸುವುದರಿಂದ ಬಿಸಿಲಿನ ತಾಪದಿಂದ ತಣ್ಣನೆಯ ಅನುಭವ ಉಂಟಾಗುತ್ತದೆ, ಇದು ಆರೋಗ್ಯದ ದೃಷ್ಟಿಯಿಂದಲೂ ಅನುಕೂಲವಾಗಿದೆ ಎಂದು ಹೇಳಿದರು.
ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟಕ್ಕಾಗಿ ಹಾಗೂ ಪ್ರಚಾರಕ್ಕಾಗಿ ರಾಜ್ಯಮಟ್ಟದ, ವಲಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ವಸ್ತುಪ್ರದರ್ಶನ ಕಾರ್ಯಕ್ರಮಗಳನ್ನು ಮಂಡಳಿ ಹಮ್ಮಿಕೊಳ್ಳುತ್ತಿದೆ. ಗ್ರಾಮೀಣ ಭಾಗದ ಕುಶಲ ಕರ್ಮಿಗಳು ಹಾಗೂ ಸಂಸ್ಥೆಗಳಿ ಉತ್ತೇಜನ ನೀಡಿ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸಲು ಇಂತಹ ಪ್ರದರ್ಶನ ಹಾಗೂ ಮಾರಾಟ ಮೇಳಗಳು ಸಹಕಾರಿಯಾಗಿವೆ ಎಂದು ಅವರು ಹೇಳಿದರು.
ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದಡಿಯಲ್ಲಿ ದುಡಿಯುವ ಸಾವಿರಾರು ಗ್ರಾಮೀಣ ಕೈಗಾರಿಕೆಗಳಿಗೆ ನಿರಂತರ ಕೆಲಸ ದೊರೆಯಲು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಮಾರಾಟವಾಗಬೇಕೆಂಬ ದೃಷ್ಟಿಯಿಂದ ರಾಜ್ಯದಾದ್ಯಂತ 10 ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಖಾದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಖಾದಿ ಬಟ್ಟೆ ಖರೀದಿಸಲು ಒಲವು ವ್ಯಕ್ತವಾಗಿದ್ದು, ಇಂದಿನ ಯುವಕರಿಗೆ ನಮ್ಮ ಸಂಸ್ಕøತಿ ಪರಂಪರೆ ತಿಳಿಸಿಕೊಡುವ ಅವಶ್ಯಕತೆ ಇದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಸ್ವದೇಶಿತನದ ಸಂಕೇತವಾದ ಖಾದಿ ಬಟ್ಟೆ ಉದ್ಯಮಕ್ಕೆ ಬಲಪಡಿಸಬೇಕಾದರೆ ಇಂದಿನ ಯುವಕರು ಹೆಚ್ಚೆಚ್ಚು ಖಾದಿ ಬಟ್ಟೆ ಒಲವು ಹೊಂದಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಮಾತನಾಡಿ, ಖಾದಿ ನಮ್ಮ ದೇಶದ ಅಸ್ಮಿತೆಯಾಗಿದೆ. ಖಾದಿ ಉತ್ಸವ ಮನೆ-ಮನಗಳ ಉತ್ಸವವಾಗಬೇಕು, ಅಂದಾಗ ಈ ಉತ್ಸವದ ಸಾರ್ಥಕತೆ ಸಾಕಾರಗೊಳ್ಳುತ್ತದೆ. ಯುವಕರು ಖಾದಿಯ ಬಗ್ಗೆ ಒಲವು ಹೊಂದಿ, ಖಾದಿ ಬಟ್ಟೆ ಬಳಸಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಖಾದಿ ಉತ್ಪನ್ನಕ್ಕೆ ಬ್ರ್ಯಾಂಡ್ ಸಿಗುವಂತಾಗಿ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಡಿ ಕೈಗಾರಿಕೆ ಈ ಉದ್ಯಮಕ್ಕೆ ಬೆಂಬಲ ದೊರಕಬೇಕು. ಈ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೊತ್ಸಾಹ ನೀಡಬೇಕು ಎಂದು ಹೇಳಿದರು.
ಕೆ.ಕೆ.ಜಿ.ಎಸ್. ಅಧ್ಯಕ್ಷರಾದ ಬಿ.ಬಿ.ಪಾಟೀಲ (ಶೇಗುಣಸಿ) ಅವರು ಮಾತನಾಡಿ, ಈ ಹಿಂದೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಖಾದಿ ಉತ್ಸವಕ್ಕೆ ಜನರಿಂದ ಅಪಾರ ಪ್ರೊತ್ಸಾಹ ದೊರೆತಿರುವುದನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿದರು.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಬಿ.ನಟೇಶ ಪ್ರಾಸ್ತಾವಿಕ ನುಡಿಗಳನ್ನಾಡಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟವನ್ನು ದ್ವಿಗುಣಗೊಳಿಸಲು ಆರ್‍ಇಪಿಜಿ ಹಾಗೂ ಪಿಎಂಇಜಿಪಿಯಡಿ ಆರ್ಥಿಕ ನೆರವು ಪಡೆದ ಘಟಕಗಳ ಉತ್ಪನ್ನಗಳನ್ನು ಸಾರ್ವಜನಿಕರಿಗೆ ತಲುಪಿಸಲು ರಾಜ್ಯ ಸರ್ಕಾರದ ನೆರವಿನಿಂದ ಹಲವಾರು ಕಾರ್ಯಕ್ರಮಗಳನ್ನು ಮಂಡಳಿ ಅನುಷ್ಠಾನಗೊಳಿಸುತ್ತಿದೆ ಎಂದು ಅವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಹತ್ತಿರ ಇರುವ ಚಾಂದನಿ ಪಂಕ್ಷನ್ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಮೋದ್ಯೋಗ ಮಂಡಳಿ ವತಿಯಿಂದ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 17ರ ವರೆಗೆ 10 ದಿನಗಳ ಕಾಲ ಖಾದಿ ಉತ್ಸವವನ್ನು ಆಯೋಜಿಸಿದೆ. ಬೆಳಿಗ್ಗೆ 10 ರಿಂದ ರಾತ್ರಿ 9ಗಂಟೆಯವರೆಗೆ ನಡೆಯುವ ಈ ಉತ್ಸವದಲ್ಲಿ ಜಿಲ್ಲೆ,ರಾಜ್ಯ, ಹೊರ ರಾಜ್ಯದ ಖಾದಿ ಉತ್ಪನ್ನಗಳ ಪ್ರದರ್ಶನ ಮಾರಾಟ ನಡೆಯಲಿದೆ.
ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ, ದಾವಣಗೆರೆ,ಚಿತ್ರದುರ್ಗ, ಕೋಲಾರ,ಚಿಕ್ಕಬಳ್ಳಾಪುರ, ರಾಮನಗರ,ತುಮಕೂರು, ಬಳ್ಳಾರಿ,ಕೊಪ್ಪಳ,ಬೀದರ, ಮಂಡ್ಯ ಮೈಸೂರು, ಹಾಗೂ ಹೊರ ರಾಜ್ಯಗಳಿಂದ ವಸ್ತು ಪ್ರದರ್ಶನದಲ್ಲಿ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿವಸ್ತ್ರ, ಶುದ್ಧ ಖಾದಿ ರೇμÉ್ಮ ಸೀರೆಗಳು, ಕಸೂತಿ ಸೀರೆಗಳು, ಚನ್ನಪಟ್ಟಣ ಗೊಂಬೆಗಳು, ಜಾಕೇಟ್, ಕರದಂಟು, ಸಿಹಿ ತಿಂಡಿಗಳು, ಡಿಜೈನ್ ಬ್ಯಾಗಗಳು, ಬಿದಿರು ಬೆತ್ತ, ರೆಡಿಮೇಡ್ ಶಟ್ರ್ಗಳು ಪಾದರಕ್ಷೆಗಳು ಮೇಳದ ವಿವಿಧ ಮಳಿಗೆಗಳಲ್ಲಿ ಲಭ್ಯವಿದೆ. ಖಾದಿ, ರೇμÉ್ಮ ಹಾಗೂ ಉಣ್ಣೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಪ್ರಯುಕ್ತ ವಿಶೇಷವಾಗಿ ಶುದ್ಧ ರೇμÉ್ಮ ಸೀರೆಗಳು ಹೆಚ್ಚಿನ ಪ್ರಮಾಣದಲ್ಲಿ ಈ ಮಾರಾಟ ಮಳಿಗೆಗಳಲ್ಲಿವೆ.
ವಿಜಯಪುರ ಜಿಲ್ಲೆಯ ಸಾರ್ವಜನಿಕರು ಈ ವಸ್ತು ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಖಾದಿ ಉತ್ಪನ್ನಗಳಿಗೆ ಪೆÇ್ರೀತ್ಸಾಹಿಸಬೇಕೆಂದು ಜಿಲ್ಲಾ ಖಾದಿ ಗ್ರ್ರಾಮೋದ್ಯೋಗ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ನಾರಾಯಣ ಡಿ.ಕಾಂಬಳೆ, ಯಾದವಾಡ ಸಿದ್ದನಗೌಡ, ವೆಂಕಟೇಶ್ವರ ಸೇರಿದಂತೆ ವಿವಿಧ ಮಾರಾಟಗಾರರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande