ನವದೆಹಲಿ, 3 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮೋದಿ ಸರ್ಕಾರದ ಸಂಕಲ್ಪ 2026ರ ಮಾರ್ಚ್ 31ರೊಳಗೆ ದೇಶವನ್ನು ಸಂಪೂರ್ಣ ನಕ್ಸಲ್ ಮುಕ್ತಗೊಳಿಸುವುದೇ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಛತ್ತೀಸ್‌ಗಢದ ಬಸ್ತಾರ್‌ನ ಕರ್ರೆಗುತ್ತಲು ಬೆಟ್ಟದಲ್ಲಿ ನಡೆದ ಆಪರೇಷನ್ ಬ್ಲಾಕ್ ಫಾರೆಸ್ಟ್ ಯಶಸ್ವಿಯಾಗಿ ಮುಗಿಸಿದ ಸಿಆರ್‌ಪಿಎಫ್, ಛತ್ತೀಸ್‌ಗಢ ಪೊಲೀಸ್, ಡಿಆರ್‌ಜಿ ಹಾಗೂ ಕೋಬ್ರಾ ಫೋರ್ಸ್ ಸಿಬ್ಬಂದಿಯನ್ನು ಶಾ ಅವರು ನವದೆಹಲಿಯಲ್ಲಿ ಸನ್ಮಾನಿಸಿ ಮಾತನಾಡಿದರು.
ಎಲ್ಲ ನಕ್ಸಲರು ಶರಣಾಗುವವರೆಗೆಅಥವಾ ನಿರ್ಮೂಲನೆಯಾಗುವವರೆಗೆ ನಾವು ವಿಶ್ರಮಿಸುವುದಿಲ್ಲ. 2026ರ ಮಾರ್ಚ್ 31ರೊಳಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸಲಾಗುವುದು,” ಎಂದು ಶಾ ಘೋಷಿಸಿದರು.
ಕರ್ರೆಗುತ್ತಲು ಬೆಟ್ಟದಲ್ಲಿ 19 ದಿನಗಳ ಕಾಲ ನಡೆದ ಭೀಕರ ಕಾರ್ಯಾಚರಣೆಯಲ್ಲಿ ಯಾವುದೇ ಸಾವು-ನೋವುಗಳಿಲ್ಲದೆ 30 ಕ್ಕೂ ಹೆಚ್ಚು ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದನ್ನು ಅವರು ಐತಿಹಾಸಿಕ ಜಯವೆಂದು ಕರೆದರು. ಕಠಿಣ ಭೌಗೋಳಿಕ ಪರಿಸ್ಥಿತಿಗಳು ಮತ್ತು ಐಇಡಿ ಬೆದರಿಕೆಗಳ ನಡುವೆಯೂ ಪಡೆಗಳು ಧೈರ್ಯದಿಂದ ನಕ್ಸಲೀಯರ ಮೂಲ ಶಿಬಿರ ಮತ್ತು ಪೂರೈಕೆ ಸರಪಳಿಯನ್ನು ನಾಶಪಡಿಸಿರುವುದನ್ನು ಅವರು ಶ್ಲಾಘಿಸಿದರು.
ದಶಕಗಳಿಂದ ನಕ್ಸಲರು ದೇಶದ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಯಿಂದ ವಂಚಿತಗೊಳಿಸಿರುವುದನ್ನು ಉಲ್ಲೇಖಿಸಿದ ಶಾ, ಇಂದು ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಪರಿಣಾಮವಾಗಿ ಪಶುಪತಿನಾಥದಿಂದ ತಿರುಪತಿವರೆಗಿನ 6.5 ಕೋಟಿ ಜನರ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ” ಎಂದರು.
ಗಂಭೀರವಾಗಿ ಗಾಯಗೊಂಡ ಭದ್ರತಾ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಎಲ್ಲಾ ರೀತಿಯ ಸಹಾಯ ಒದಗಿಸಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಮತ್ತು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa