ಕೋಲಾರ, 0೩ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಜನ ಹಾಗೂ ರೈತ ವಿರೋಧಿ ಧೋರಣೆ ಅನುಸರಿಸಿಕೊಂಡು ಬರುತ್ತಿರುವುದರಿಂದಾಗಿ ಜನತೆ ಇತ್ತೀಚಿನ ಚುನಾವಣೆಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ತಕ್ಕಪಾಠ ಕಲಿಸುತ್ತಿದ್ದು, ಇವೆಲ್ಲವೂ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ ಎಂದು ಕೋಲಾರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.
ಕೋಲಾರ ನಗರದ ತಮ್ಮ ಕಚೇರಿಯಲ್ಲಿ ತಾಲೂಕಿನ ದೊಡ್ಡಹಸಾಳ ಎಂಪಿಸಿಎಸ್ನ ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಿರ್ದೇಶಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ಎರಡು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿ ಭ್ರಷ್ಟಾಚಾರ, ನಾನಾ ಹಗರಣಗಳಲ್ಲಿ ಭಾಗಿಯಾಗಿರುವುದರಿಂದ ಜನತೆ ಬೇಸತ್ತಿದ್ದು, ಕಾಂಗ್ರೆಸ್ ವಿರೋಧಿ ರೀತಿಯಲ್ಲಿ ಮೈತ್ರಿ ಬೆಂಬಲಿ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಸರಕಾರಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಜಾತಿ-ಧರ್ಮಗಳ ಮಧ್ಯೆ ಸಂಘರ್ಷ, ಒಡೆದು ಆಳುವ ನೀತಿಯಿಂದ ರಚನೆಯಾದ ಸರಕಾರವು ನಂತರದ ಬೆಳವಣಿಗೆಗಳಲ್ಲಿ ಉಚಿತ ಭಾಗ್ಯಗಳನ್ನೂ ಪೂರೈಸುವಲ್ಲಿ ವಿಫಲವಾಗಿದೆ. ಅಭಿವೃದ್ಧಿಯೂ ಶೂನ್ಯವಾಗಿದ್ದು, ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಸಹಾಯಧನವನ್ನೂ ಕಡಿತಗೊಳಿಸಲಾಗಿದೆ, ಅಲ್ಲದೆ ಹಾಲಿಗೆ ಬೆಂಬಲ ಬೆಲೆ ನೀಡಲೂ ಸಾಧ್ಯವಾಗದಾಗಿದ್ದು, ಇದಕ್ಕೆಲ್ಲ ಸರಕಾರವು ದಿವಾಳಿಯಾಗಿರುವುದೇ ಕಾರಣ ಎಂದು ಅಸಮಧಾನ ವ್ಯಕ್ತಪಡಿಸಿದರು.
ಎಲ್ಲಾ ಕಾರಣಗಳಿಂದಾಗಿ ದೊಡ್ಡಹಸಾಳ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೯ ಕ್ಕೆ ೯ ಸ್ಥಾನಗಳಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮೈತ್ರಿ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇನ್ನು ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ, ದೌರ್ಜನ್ಯ, ಗುಂಪುಗಾರಿಕೆ ತೀವ್ರವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಇದರಿಂದಾಗಿ ಜನರು ಬೇಸತ್ತು ಹಿಡಿಶಾಪ ಹಾಕುತ್ತಿದ್ದು, ನಿಮ್ಮ ಗುಂಪುಗಾರಿಕೆ, ಜಗಳ ಬದಿಗಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವುದು ಸೂಕ್ತ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮುಖಂಡರಾದ ಸಿಎಂಆರ್ ಹರೀಶ್, ದಿಂಬ ನಾಗರಾಜ್, ತಾಪಂ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ದೊಡ್ಡಹಸಾಳ ಎಂಪಿಸಿಎಸ್ ನೂತನ ನಿರ್ದೇಶಕರಾದ ಸಿ.ನಾರಾಯಣಪ್ಪ, ಮರಿಯಪ್ಪ, ಆನಂದ್ ಕುಮಾರ್, ರವಿಕುಮಾರ್, ಟಿ.ಮುನಿಯಪ್ಪ, ಕೃಷ್ಣಮೂರ್ತಿ, ರಾಣಿಯಮ್ಮ, ಭಾಗ್ಯಮ್ಮ, ಮಂಜುನಾಥ್ ಮುಂತಾದವರಿದ್ದರು.
ಚಿತ್ರ : ಕೋಲಾರ ನಗರದ ತಮ್ಮ ಕಚೇರಿಯಲ್ಲಿ ತಾಲೂಕಿನ ದೊಡ್ಡಹಸಾಳ ಎಂಪಿಸಿಎಸ್ನ ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಿರ್ದೇಶಕರನ್ನು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅಭಿನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್