ಗದಗ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿನ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲು ಅರೆ ಕಾಲಿಕ ಸ್ವಯಂ ಸೇವಕರುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 20 ಕೊನೆಯ ದಿನವಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಎಚ್.ಶಶಿಧರ್ ಶೆಟ್ಟಿ ಹೇಳಿದರು.
ಅವರು ಬೆಂಗಳೂರಿನಿಂದ ಎಲ್ಲ ಜಿಲ್ಲಾ ಕೇಂದ್ರಗಳ ಕಾನೂನು ಸೇವಾ ಪ್ರಾದಿಕಾರದ ಮೂಲಕ ಪತ್ರಕರ್ತರೊಂದಿಗೆ ವಿಡಿಯೋ ಕಾನ್ಫರನ್ಸ್ನಲ್ಲಿ ಜರುಗಿದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಸ್ವಪ್ರೇರಿತ ಕಾನೂನು ಸಹಾಯಕರು ಯಾವುದೇ ಶುಲ್ಕ, ಸಂಭಾವನೆ ಅಥವಾ ಸಂಬಳವನ್ನು ನಿರೀಕ್ಷಿಸದೆ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಶೋಷಿತ ಹಾಗೂ ತುಳಿತಕ್ಕೊಳಗಾದ ಜನರ ಸೇವೆಗಳನ್ನು ಮಾಡಲು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಲು ಇಚ್ಚಿಸುವ ಕಾನೂನು ವಿದ್ಯಾರ್ಥಿಗಳು, ವೈಧ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಎಮ್.ಎಸ್.ಡಬ್ಲೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಕಾನೂನು ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಿವೃತ್ತ ಸರ್ಕಾರಿ ನೌಕರರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬದ ಸದಸ್ಯರು, ವಿವಿಧ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಸೇವಾ ಮನೋಭಾವ ಹೊಂದಿರುವ ಪುರುಷ ಮತ್ತು ಮಹಿಳೆಯರು, ಮಂಗಳಮುಖಿಯರು, ಸನ್ನಡತೆ ಹೊಂದಿದ ಕಾರಾಗೃಹ ಬಂದಿಗಳು ಮತ್ತು ಸ್ವ-ಸಹಾಯ ಸಂಘಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಸೇವೆ ಸಲ್ಲಿಸಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.
ಗದಗ ತಾಲೂಕಿನಲ್ಲಿ ಸೇವೆ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ಗದಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ ಕಚೇರಿಗೆ ಹಾಗೂ ಆಯಾ ತಾಲೂಕಿನ ಅಭ್ಯರ್ಥಿಗಳು ಮೇಲ್ಕಂಡ ತಾಲೂಕಿನ ನ್ಯಾಯಾಲಯದ ಆವರಣದಲ್ಲಿರುವ ತಾಲೂಕಾ ಕಾನೂನು ಸೇವಾ ಸಮಿತಿಗಳಲ್ಲಿರುವ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಖುದ್ದಾಗಿ ಸಲ್ಲಿಸಬೇಕು. ಸಂದರ್ಶನದ ದಿನಾಂಕ ಹಾಗೂ ಸಮಯವನ್ನು ನಂತರ ತಿಳಿಸಲಾಗುವುದು ಎಂದರು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಐಡಿ ಗುರುತಿನ ಚೀಟಿ ನೀಡುವುದರೊಂದಿಗೆ ಒಂದು ವರ್ಷದವರೆಗೆ ನೇಮಕ ಮಾಡಿಕೊಳ್ಳಲಾಗುವುದು. ಅವರು ತಮ್ಮ ವ್ಯಾಪ್ತಿಯಲ್ಲಿ ಇರುವ ವಿವಿಧ ರೀತಿಯ ಪ್ರಕರಣ ಸೇರಿದಂತೆ ಕಾನೂನು ಸೇವಾ ಪ್ರಾಧಿಕಾರ ವಹಿಸುವ ಕಾರ್ಯವನ್ನು ನಿರ್ವಹಿಸಬೇಕು. ಅವರ ಕಾರ್ಯ ತೃಪ್ತಿಕರವಾಗಿದ್ದಲ್ಲಿ ಮುಂದುವರೆಸಲಾಗುವುದು ನ್ಯಾಯಮೂರ್ತಿ ಎಚ್.ಶಶಿಧರ್ ಶೆಟ್ಟಿ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ, ಅವರು ಮಾತನಾಡಿ ಸ್ವಯಂ ಸೇವಕರ ಹುದ್ದೆಗಾಗಿ ಅರ್ಜಿ ಸಲ್ಲಿಸಲು ವಿವಿಧ ಕ್ಷೇತ್ರಗಳ ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ವಹಿಸಿದ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಬೇಕು ಎಂದರು.
ಹಿಂದೂಸ್ತಾನ್ ಸಮಾಚಾರ್ / lalita MP