ಜಿಲ್ಲೆಯ ಅರಣ್ಯ ಪ್ರದೇಶ ; ಶೇ.10ರಷ್ಟು ಹೆಚ್ಚಿಸುವ ಗುರಿ : ಸಚಿವ ಎಂ.ಬಿ.ಪಾಟೀಲ
ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದ ವಿಜಯಪುರ ಜಿಲ್ಲೆಯಲ್ಲಿ ಪರಿಸರ ಕಾಳಜಿಯೊಂದಿಗೆ ಕೋಟಿ ವೃಕ್ಷ ಅಭಿಯಾನದ ಮೂಲಕ 0.17ರಷ್ಟಿದ್ದ ಜಿಲ್ಲೆಯ ಅರಣ್ಯ ಪ್ರದೇಶವನ್ನು ಶೇಕಡಾ 2ರಷ್ಟು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶೇ.10 ರಷ್ಟು ಹೆಚ್ಚಿಸುವ ಗುರ
ಪಾಟೀಲ


ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದ ವಿಜಯಪುರ ಜಿಲ್ಲೆಯಲ್ಲಿ ಪರಿಸರ ಕಾಳಜಿಯೊಂದಿಗೆ ಕೋಟಿ ವೃಕ್ಷ ಅಭಿಯಾನದ ಮೂಲಕ 0.17ರಷ್ಟಿದ್ದ ಜಿಲ್ಲೆಯ ಅರಣ್ಯ ಪ್ರದೇಶವನ್ನು ಶೇಕಡಾ 2ರಷ್ಟು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶೇ.10 ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.

ಶುಕ್ರವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಕೈಗಾರಿಕೆ ಇಲಾಖೆ ವ್ಯಾಪ್ತಿಯ ಕೆಎಸ್‍ಡಿಎಲ್- ಸಿಎಸ್‍ಆರ್ ಅನುದಾನದಲ್ಲಿ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 20ಜನ ಸಿಬ್ಬಂದಿಗಳಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.

ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ವಿಜಯಪುರ ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ 2016ರಲ್ಲಿ ಆರಂಭಿಸಿದ ಕೋಟಿ ವೃಕ್ಷ ಅಭಿಯಾನವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಸಸಿ-ಗಿಡಗಳನ್ನು ಬೆಳೆಸಿ ಸಂರಕ್ಷಿಸಲಾಗುತ್ತಿದೆ. ಈ ಅಭಿಯಾನ ನಿರಂತರವಾಗಿ ಸಾಗಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಅರಣ್ಯ ಪ್ರದೇಶ ಶೇ.10 ರಿಂದ 15 ರಷ್ಟಾಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಪರಿಸರ ರಕ್ಷಣೆ, ಗಿಡ-ಸಸಿ ಬೆಳೆಸುವ ಕಾರ್ಯ ನಡೆಯಬೇಕು. ನಿಸರ್ಗ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.

ಅದರಂತೆ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹಲವು ನೀರಾವರಿ ಕಾರ್ಯಗಳನ್ನು ಕೈಗೊಂಡು ಅಭಿವೃದ್ದಿಪಡಿಸಲಾಗಿದೆ. ದೇಶದ ರಾಜಸ್ಥಾನದ ಜೈಸಲ್ಮೇರ್ ಹಾಗೂ ವಿಜಯಪುರ ತೀವ್ರ ಬರ ಪೀಡಿತ ಪ್ರದೇಶವಾಗಿತ್ತು. ಇಂತಹ ಬರ ಪೀಡಿತ ಪ್ರದೇಶದಲ್ಲಿ ಅರಣ್ಯೀಕರಣ ಹೆಚ್ಚಿಸಿದ್ದು ಒಂದು ಸಾಧನೆಯಾಗಿದೆ. ನೀರಾವರಿ ಕಾಮಗಾರಿಗಳಿಂದ ಈ ಭಾಗದಲ್ಲಿ ಅಂತರಜಲಮಟ್ಟ ಹೆಚ್ಚಾಗಿ ಇಲ್ಲಿನ ಭೂಮಿಗೆ ಬೆಲೆ ಬಂದಿದೆ. ರೈತರು ಹಲವು ತಳಿಯ ಬೆಳೆಗಳನ್ನು, ಹಣ್ಣು ಹಂಪಲಗಳನ್ನು ಬೆಳೆದು ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಂಡಿದ್ದಾರೆ. ಸಚಿನಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದು ಅವರು ಹೇಳಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್.ಡಿ.ಎಲ್) ಸಂಸ್ಥೆಯು ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಮೈಸೂರು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯರವರು ಕೈಗಾರಿಕೋದ್ಯಮಿಗಳಾದ ಎಸ್.ಜಿ.ಶಾಸ್ತಿ ಅವರ ದೂರದೃಷ್ಟಿಯಿಂದ 1916ರಲ್ಲಿ ಸ್ಥಾಪಿತಗೊಂಡು ಶತಮಾನಗಳ ಇತಿಹಾಸ ಹೊಂದಿರುತ್ತದೆ. ಈ ಸಂಸ್ಥೆಯ ಉತ್ಪನ್ನಗಳಿಗೆ ಬೇಕಾಗುವ ಗಂಧದೆಣ್ಣೆಗೆ ಅರಣ್ಯವೇ ಮೂಲ. ಈ ಅರಣ್ಯಗಳನ್ನು ಮುಂಚೂಣಿಯಲ್ಲಿದ್ದು ಸಂರಕ್ಷಿಸುವವರು ವನಪಾಲಕರು.ತಮ್ಮ ದೈನಂದಿನ ಬದುಕಿನಲ್ಲಿ ಪ್ರಾಣಾಪಾಯ ಲೆಕ್ಕಿಸದೆ ಕಾಡಿನ ಸಂರಕ್ಷಣೆಯಲ್ಲಿ ತೊಡಗಿರುವ ಈ ಪರಿಸರ ಯೋಧರಿಗೆ ಕೃತಜ್ಞತೆ ಅರ್ಪಿಸುವುದು ಸೂಕ್ತವೆಂದು ಭಾವಿಸುತ್ತೇನೆ. ಅದರಂತೆ, ರಾಜ್ಯದ ಅರಣ್ಯ ಸಂಪತ್ತನ್ನು ಸಂರಕ್ಷಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಕಾರ್ಯನಿರತ ಅರಣ್ಯ ರಕ್ಷಕರುಗಳಿಗೆ ಇನ್ನೂ ಉತ್ತಮವಾಗಿ ಸೇವೆ ಸಲ್ಲಿಸಲು ಪ್ರೇರೇಪಿಸುವ ದೃಷ್ಠಿಯಿಂದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವ್ಯಾಪ್ತಿಯಲ್ಲಿನ ಕೆ.ಎಸ್.ಡಿ.ಎಲ್ ಸಂಸ್ಥೆಯ ವತಿಯಿಂದ ಸಿ.ಎಸ್.ಆರ್. ಅನುದಾನದಡಿ ಉಪಯುಕ್ತ ಪರಿಕರಗಳಿರುವ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಅರಣ್ಯ ಇಲಾಖೆಯ 10 ಸಾವಿರ ಸಿಬ್ಬಂದಿಗಳಿಗೆ ಕಿಟ್‍ಗಳನ್ನು ಒದಗಿಸುವ ಮೂಲಕ ಅವರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ಅವರು ಮಾತನಾಡಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್.ಡಿ.ಎಲ್) ಸಂಸ್ಥೆಯ ಸಿಎಸ್‍ಆರ್ ಅನುದಾನವನ್ನು ಬಳಕೆ ಮಾಡಿಕೊಂಡು ಅರಣ್ಯ ಇಲಾಖೆಯ 10 ಸಾವಿರ ಸಿಬ್ಬಂದಿಗಳಿಗೆ ಕಿಟ್ ವಿತರಿಸುತ್ತಿರುವುದು ಅನುದಾನದ ಸದ್ಭಳಕೆಯಾಗಿದೆ. ಕಷ್ಟಕರ ಮತ್ತು ಕ್ಲೀಷಕರ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಿ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆ ಮಾಡುತ್ತಿರುವ ಮುಂಚೂಣಿ ಸಿಬ್ಬಂದಿಗಳಿಗೆ ಅತ್ಯಂತ ಅವಶ್ಯಕವಿರುವ ಕಿಟ್ ವಿತರಣೆ ಮಾಡುವ ಉತ್ತಮ ಕಾರ್ಯಕ್ಕೆ ಈ ಅನುದಾನ ವಿನಿಯೋಗವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ಮಾತನಾಡಿ, ಜಿಲ್ಲೆಯು ಅರಣ್ಯೀಕರಣದಲ್ಲಿ ದಾಪುಗಾಲು ಇಡುತ್ತಿದೆ. ಆ ನಿಟ್ಟಿನಲ್ಲಿ ಅರಣ್ಯೀಕರಣದ ಸಾಧನೆಯನ್ನು ನ್ಯೂಯಾರ್ಕ ಟೈಮ್ಸ್ ಪತ್ರಿಕೆಯು ಪ್ರಕಟಿಸಿ ಜಾಗತಿಕ ಮಟ್ಟದಲ್ಲಿ ಜಿಲ್ಲೆಯ ಅರಣ್ಯೀಕರಣದ ಯಶೋಗಾಥೆ ಕೇಳಿಬರುತ್ತಿದೆ. ಒಂದು ಕಾಲದಲ್ಲಿ ಕುಡಿಯುವ ನೀರಿಗೂ ತಾತ್ವಾರ, ವಿಪರೀತ ತಾಪಮಾನ ಹೊಂದಿದ್ದ ಜಿಲ್ಲೆ ನೀರಾವರಿ ಹಾಗೂ ಅರಣ್ಯೀಕರಣದಿಂದ ಸಮತೋಲಿತ ತಾಪಮಾನ ಅನುಭವವನ್ನು ಅನುಭವಿಸಿತ್ತಿದ್ದೇವೆ. ಕೋಟಿ ವೃಕ್ಷ ಅಭಿಯಾನ ಇದೊಂದು ಜನಾಂದೋಲನವಾಗಿ ಕಚೇರಿ ಮನೆಯಂಗಳದಲ್ಲೂ ಸಾರ್ವಜನಿಕರು ಗಿಡ ನೆಟ್ಟು ಪೆÇೀಷಿಸುತ್ತಿದ್ದಾರೆ. ಅರಣ್ಯೀಕರಣದಿಂದ ಪಶು ಪಕ್ಷಿಗಳಿಗೆ ಆಶ್ರಯವಾಗಿದೆ ಸುಸ್ಥಿರ ಅಭಿವೃದ್ಧಿಗೆ ಇದು ಮುನ್ನುಡಿಯಾಗಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಅಂಗವಾಗಿ ಬೆಳಗಾವಿ ವಿಭಾಗ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಮುಂಚೂಣಿ ಕಾರ್ಯನಿರತ ಸಿಬ್ಬಂದಿಗಳಾದ ಅರಣ್ಯ ರಕ್ಷಕರು,ವೀಕ್ಷಕರು ಮತ್ತು ವಾಹನ ಚಾಲಕರುಗಳಿಗೆ ಉತ್ತಮ ಗುಣಮಟ್ಟದ ಶೂ, ಜರ್ಕಿನ್, ಬ್ಯಾಗ್ ಹಾಗೂ ನೀರಿನ ಬಾಟಲಿ ಇರುವ ವಿಶೇಷ ಕಿಟ್ ನೀಡಲಾಯಿತು ಹಾಗೂ ಬಿಲ್ ವಿದ್ಯೆ (ಆರ್ಚರಿ) ಕ್ರೀಡಾಪಟು ಶಹಾಪುರದ ದೇವಮ್ಮ ಜಂಗಿನಾಳಗೆ ಬಿಲ್ ವಿದ್ಯೆ ಪರಿಕರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಬೆಳಗಾವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ವನ್ಯ ಜೀವಿ ಮಂಡಳಿ ಸದಸ್ಯರಾದ ಧ್ರುವ ಎಂ.ಪಾಟೀಲ, ವಿಜಯಪುರ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ಕೆಬಿಜೆಎನ್‍ಎಲ್ ಉಪ ಸಂರಕ್ಷಣಾಧಿಕಾರಿ ಎನ್.ಕೆ.ಬಾಗಾಯತ್ ಸೇರಿದಂತೆ ಅರಣ್ಯ ಇಲಾಖೆ ಹಾಗೂ ಕೆಎಸ್‍ಡಿಎಲ್ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೆಎಸ್‍ಡಿಎಲ್‍ದ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಕೆ.ಎಂ.ಪ್ರಶಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹಾಂತೇಶ ಬಿರಾದಾರ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande