ಕೋಲಾರ, ೧೯ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೋಲಾರ ಜಿಲ್ಲೆಯ ಸರ್ಕಾರಿ ಪಡಿತರ ಚೀಟಿಯ ಅಕ್ಕಿಯನ್ನು ರೈಸ್ ಮಿಲ್ಗಳು ಕಾಳಸಂತೆಯಲ್ಲಿ ಮಾರಾಟ ಮಾಡಿ, ಬಡವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿ, ವಂಚನೆ ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸಮರಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಹಾಗೂ ಆಹಾರ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಪಡಿತರ ಚೀಟಿಯ ಅನ್ನಭಾಗ್ಯದ ಬಿ.ಪಿ.ಎಲ್. ಫಲಾನುಭವಿಗಳ ಅಕ್ಕಿಯನ್ನು ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳವರು ಖಾಸಗಿ ರೈಸ್ ಮಿಲ್ಗಳಿಗೆ ಕಾಳಸಂತೆಯಲ್ಲಿ ಮಾರಟ ಮಾಡುತ್ತಿದ್ದಾರೆ. ರೈಸ್ಮಿಲ್ ರವರು ಅಕ್ರಮವಾಗಿ ಪಾಲೀಷ್ ಮಾಡಿ ೨೫, ೧೦ ಮತ್ತು ೦೫ ಕೆ.ಜಿಗಳ ಚೀಲಗಳಲ್ಲಿ ಬ್ರಾಂಡೆಡ್ ಹೆಸರುಗಳನ್ನು ನಕಲು ಮಾಡಿ, ಮಾರಾಟ ಮಾಡಿ, ಇದರಿಂದ ಜಿಲ್ಲೆಯ ಬಿ.ಪಿ.ಎಲ್. ಪಡಿತರ ಚೀಟಿಯ ಫಲಾನುಭವಿಗಳಿಗೆ ಸರಿಯಾಗಿ ಅಕ್ಕಿಯನ್ನು ನೀಡದೇ ಬಡವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿ ವಂಚನೆ ಮಾಡುತ್ತಿದ್ದಾರೆ. ಈ ದಂಧೆಯ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಆಹಾರ ಇಲಾಖೆಯ ತಾಲ್ಲೂಕು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಮೌಖಿಕವಾಗಿ ಅನೇಕ ಬಾರಿ ದೂರನ್ನು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ದೂರಿದರು.
ಈ ಅಕ್ರಮದ ಬಗ್ಗೆ ಸೂಕ್ತ ತನಿಖೆ ಮಾಡಿ, ಜಿಲ್ಲೆಯಲ್ಲಿರುವ ಖಾಸಗಿ ಅಕ್ಕಿ ಗಿರಣಿಗಳಿಗೆ ಬೇಟಿ ನೀಡಿ, ಅಕ್ರಮವಾಗಿ ದಾಸ್ತಾನು ಮಾಡಿರುವ ಅನ್ನಭಾಗ್ಯದ ಅಕ್ಕಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು, ಸರಿಯಾದ ಸಮಯಕ್ಕೆ ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಪಡಿತರ ಚೀಟಿಯ ಅನ್ನಭಾಗ್ಯದ ಬಿ.ಪಿ.ಎಲ್. ಫಲಾನುಭವಿಗಳ ಅಕ್ಕಿಯನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಸಮರಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕರವೇ ಸೋಮಶೇಖರ್, ಅನಿಲ್, ಶ್ರೀನಾಥ್, ನವೀನ್, ತ್ರಿಭುವನ್, ಸಂತೋಷ್, ರವಿಕುಮಾರ್, ಮನೋಜ್, ಧನರಾಜ್, ಮಂಜುನಾಥ್ ಇನ್ನೂ ಹಲವಾರು ಮುಖಂಡರು ಇದ್ದರು.
ಚಿತ್ರ : ಪಡಿತರ ಅಕ್ಕಿಯನ್ನು ರೈಸ್ ಮಿಲ್ಗಳು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಮರಸೇನೆ ವತಿಯಿಂದ ಕೋಲಾರ ನಗರದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಹಾಗೂ ಆಹಾರ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಆಯ್ತು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್