ಹಿಂಗಾರು ಹಂಗಾಮಿನ ಪೂರ್ವಸಿದ್ಧತೆ ; ದ್ವೈಮಾಸಿಕ ಕಾರ್ಯಾಗಾರ
ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಹೇಳಿದ್ದಾರೆ. ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಪಂಚಾಯತ್
ಹಿಂಗಾರು ಹಂಗಾಮಿನ ಪೂರ್ವಸಿದ್ಧತೆ ; ದ್ವೈಮಾಸಿಕ ಕಾರ್ಯಾಗಾರ


ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಹೇಳಿದ್ದಾರೆ.

ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆ, ಕೊಪ್ಪಳ ಮತ್ತು ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಹಾಗೂ ಕೃಷಿ ತಂತ್ರಜ್ಞರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಹಿಂಗಾರು ಹಂಗಾಮಿನ ಪೂರ್ವಸಿದ್ಧತೆ ದ್ವೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸದ್ಯ ಮುಂಗಾರು ಹಂಗಾಮು ಪೂರ್ಣಗೊಂಡಿದ್ದು, ಹಿಂಗಾರು ಹಂಗಾಮಿನಲ್ಲಿ ಪ್ರಾರಂಭಗೊಳ್ಳಲಿರುವ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆಗೆ ಅವಶ್ಯವಿರುವ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡು ರೈತರಿಗೆ ಸಕಾಲದಲ್ಲಿ ಪೂರೈಸಬೇಕು. ಬಿತ್ತನೆಯ ನಂತರವು ಬೆಳೆಗಳಿಗೆ ಬೇಕಾಗುವ ಯುರಿಯಾ ಹಾಗೂ ಇತರೆ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ರೈತರ ಬೇಡಿಕೆಯಂತೆ ಪೈರೈಸಬೇಕು. ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಪ್ರತಿ ಹೋಬಳಿ ಮಟ್ಟದಲ್ಲಿ ಬೀಜೋಪಚಾರ ಅಂದೋಲನ ಕೈಗೊಳ್ಳಬೇಕು. ರೈತರಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಗುಣಮಟ್ಟ ಪರೀಕ್ಷಿಸಲು ಪ್ರತಿ ಮಾಹೆಯ ಮೊದಲನೇವಾರ ಗುಣ ನಿಯಂತ್ರಣ ಸಪ್ತಾಹ ಕೈಗೊಳ್ಳಬೇಕು. ಆತ್ಮ, ಕೃಷಿ ಸಂಜೀವಿನಿ ಹಾಗೂ ಕೃಷಿ ಸಖಿ ಮತ್ತು ಪಶು ಸಖಿ ಸಹಾಯದಿಂದ ಒಳ್ಳೆಯ ಗುಣಮಟ್ಟದ ಬಿತ್ತನೆ ಬೀಜ ಬಿತ್ತಲು ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರು ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ಬಿತ್ತನೆ ಗುರಿ 1,80,725 ಹೆಕ್ಟೇರ್ ಗುರಿಯಿದ್ದು, ಬಿತ್ತನೆ ಬೀಜದ ಬೇಡಿಕೆ 93,602.63 ಕ್ವಿಂಟಲ್ ಇರುತ್ತದೆ. ಬೀಜ ಅನುಪಾತದನ್ವಯ 37,764 ಕ್ವಿಂಟಲ್ ಇದ್ದು, ಕಳೆದ ವರ್ಷ 28 ಸಾವಿರ ಕ್ವಿಂಟಲ್ ವಿತರಣೆ ಮಾಡಲಾಗಿತ್ತು. ಈ ವರ್ಷವೂ ಹಿಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳಾದ ಕಡಲೆ (18,325 ಕ್ವಿಂ), ಜೋಳ (208 ಕ್ವಿಂ), ಮೆಕ್ಕೆಜೋಳ (68 ಕ್ವಿಂ), ಶೇಂಗಾ (8616 ಕ್ವಿಂ), ಸೂರ್ಯಕಾಂತಿ (4 ಕ್ವಿಂ), ಕುಸುಬೆ (6 ಕ್ವಿಂ) ಹಾಗೂ ಗೋದಿ (13.78 ಕ್ವಿಂ), ಈ ಎಲ್ಲಾ ಬಿತ್ತನೆ ಬೀಜ ವಿತರಣೆ ಮಾಡಲು ಗುರಿಯನ್ನು ನಿಗದಿಪಡಿಸಲಾಗಿದೆ. ರೈತರ ಬೇಡಿಕೆಯಂತೆ ಬಿತ್ತನೆ ಬೀಜವು ಜಿಲ್ಲೆಯ 20 ರೈತ ಸಂಪರ್ಕ ಕೇಂದ್ರ ಹಾಗೂ 8 ಹೆಚ್ಚುವರಿ ಕೇಂದ್ರಗಳ ಮುಖಾಂತರ ಅಕ್ಟೋಬರ್ 1 ರಿಂದ ವಿತರಣೆ ಮಾಡಲು ಈಗಾಗಲೇ ಪೂರ್ವ ಸಿದ್ಧತೆ ಕೈಗೊಂಡಿದೆ. ಈ ವರ್ಷ ಬಿತ್ತನೆ ಬೀಜಕ್ಕೆ ಕೆ.ಎಸ್.ಎಸ್.ಸಿ., ಕೆ.ಒ.ಎಫ್., ಎನ್.ಎಸ್.ಸಿ ಹಾಗೂ ಖಾಸಗಿ ಕಂಪನಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನುವಿದ್ದು, ಈ ವರ್ಷ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದರು.

ಹಿಂಗಾರು ಹಂಗಾಮಿನ ಬಿತ್ತನೆಗೆ ಮುಖ್ಯವಾಗಿ ಬೇಕಾಗುವ ಬಿಳಿ ಜೋಳ 3 ಕೆ.ಜಿ ಬೀಜಕ್ಕೆ 180 ರೂ.ಗಳಿದ್ದು, ಸಾಮಾನ್ಯ ವರ್ಗದ ರೈತರಿಗೆ ರೂ. 60 ಮತ್ತು ಎಸ್ಸಿ-ಎಸ್ಟಿ ರೈತರಿಗೆ ರೂ. 90 ಸಹಾಯಧನವಿರುತ್ತದೆ. 50 ಕೆ.ಜಿ ಶೇಂಗಾ ಬೀಜಕ್ಕೆ 6750 ರೂ.ಗಳಿದ್ದು, ಸಾಮಾನ್ಯ ವರ್ಗದ ರೈತರಿಗೆ ರೂ. 700 ಮತ್ತು ಎಸ್ಸಿ-ಎಸ್ಟಿ ರೈತರಿಗೆ ರೂ. 1050 ಸಹಾಯಧನವಿರುತ್ತದೆ. ಜಿಲ್ಲೆಯಲ್ಲಿ ಬಿತ್ತನೆಗೆ ಅಗತ್ಯವಿರುವ 4492 ಟನ್ ಡಿಎಪಿ ಹಾಗೂ 15,183 ಟನ್ ಕಾಂಪ್ಲೆಕ್ಸ್ ದಾಸ್ತಾನುವಿದ್ದು, ಯೂರಿಯಾವನ್ನು ರೈತರ ಬೇಡಿಕೆಯಂತೆ ಪೂರೈಸಲಾಗುತ್ತದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಎಂ.ವಿ ರವಿ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಘವೇಂದ್ರ ಯಲಿಗಾರ, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ಮುಂದಾಳು ಡಾ. ಮೌಲಾಸಾಬ್, ಉಪ ಕೃಷಿ ನಿರ್ದೇಶಕ ಎಲ್.ಸಿದ್ದೇಶ್ವರ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande