ರಾಯಚೂರು, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಪಡೆದ 62 ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಮಹತ್ವದ ಸಮಾಲೋಚನಾ ಸಭೆಯು ಮಾಹನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾನಗರ ಪಾಲಿಕೆಯ ವಲಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಬಗ್ಗೆ ಹಾಗೂ ಪರೀಕ್ಷಾ ಫಲಿತಾಂಶವನ್ನು ಗಮನಾರ್ಹವಾಗಿ ಸುಧಾರಿಸುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಆಯಾ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಎಲ್ಲ ಗುರುಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
10 ದಿನಗಳ ಗಡುವು: ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಾಜರಾತಿ ವರದಿ, ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ವರದಿ, ಪ್ರತಿ ಶಾಲೆಯಲ್ಲಿನ ಮೂಲಭೂತ ಸೌಲಭ್ಯಗಳು ಮತ್ತು ನ್ಯೂನತೆಗಳ ಬಗ್ಗೆ ಸವಿವರವಾದ ವರದಿಯನ್ನು ಹತ್ತು ದಿನಗಳೊಗೆ ಸಲ್ಲಿಸುವಂತೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಎಲ್ಲಾ ಮುಖ್ಯಾಧ್ಯಾಪಕರಿಗೆ ಗಡುವು ವಿದಿಸಿದರು. ಎರಡು ವಾರಗಳ ನಂತರ ನಿಗದಿಪಡಿಸಲಾಗುವ ಮುಂದಿನ ಸಭೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯೊಂದಿಗೆ ಮುಖ್ಯಾಧ್ಯಾಪಕರು ಖುದ್ದು ಹಾಜರಾಗಬೇಕು ಎಂದು ನಿರ್ದೇಶನ ನೀಡಿದರು.
ಉಪ ಸಮಿತಿ ರಚಿಸಿ ಜವಾಬ್ದಾರಿ ಹಂಚಿಕೆ: ರಾಯಚೂರ ನಗರ ಸೇರಿದಂತೆ ಒಟ್ಟಾರೆ ಜಿಲ್ಲೆಯ ಫಲಿತಾಂಶ ಸುಧಾರಿಸಬೇಕು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಈ ಹಿಂದೆ ಸಭೆ ನಡೆಸಿ ಮೇಲುಸ್ತುವಾರಿಯ ನಿರ್ದೇಶನ ನೀಡಿದ್ದರು. ವಿಶೇಷವಾಗಿ ರಾಯಚೂರ ನಗರ ವ್ಯಾಪ್ತಿಯಲ್ಲಿನ ಎಲ್ಲ ಶಾಲೆಗಳ ಫಲಿತಾಂಶ ಸುಧಾರಿಸಬೇಕು ಎಂದು ಮೇಲುಸ್ತುವಾರಿಗಾಗಿ ಮಹಾನಗರ ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡು ಸಮಿತಿ ರಚನೆ ಮಾಡಿದ್ದರು. ಅದರನ್ವಯ ಸಭೆ ನಡೆಸಿ ಫಲಿತಾಂಶ ಸುಧಾರಣೆಗಾಗಿ ಪರಿಶೀಲಿಸಲಾಗುತ್ತಿದೆ. ರಾಯಚೂರ ಸಿಟಿ ವ್ಯಾಪ್ತಿಯಲ್ಲಿ, ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಸಾಧನೆ ತೋರಿದಲ್ಲಿ ಈ ಬಗ್ಗೆ ಪರಿಶೀಲಿಸಲು 5-10 ಶಾಲೆಗಳ ಗುಂಪು ರಚನೆ ಮಾಡಿ ಪ್ರತಿ ಗುಂಪಿಗೆ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಅಂಕಗಳಿಕೆಯಷ್ಟೇ ಸಾಧನೆಯಲ್ಲ: ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಅನ್ನುವುದು ಕೇವಲ ಅಂಕಗಳಿಸುವುದಷ್ಟೇ ಅಲ್ಲ, ಬದಲಾಗಿ ಅವರಿಗೆ ಉಜ್ವಲ ಭವಿಷ್ಯಕ್ಕಾಗಿ ಅವರಲ್ಲಿನ ಕೌಶಲಗಳಿಗೆ ಉತ್ತೇಜನ ನೀಡುವುದು, ಅವರಲ್ಲಿನ ಬೌದ್ಧಿಕ ಸಾಮಥ್ರ್ಯವನ್ನು ಹೆಚ್ಚಿಸುವುದು, ಈ ಮೂಲಕ ಸಮರ್ಥ ಮಾನವ ಸಂಪನ್ಮೂಲದ ಅಸ್ತಿತ್ವಕ್ಕೆ ಅಡಿಪಾಯ ಹಾಕುವುದಾಗಿದೆ. ಉತ್ತಮ ಶಿಕ್ಷಣವು ರಾಷ್ಟ್ರ ಮತ್ತು ನಗರಕ್ಕೆ ಬಲವಾದ ಮಾನವ ಸಂಪನ್ಮೂಲವನ್ನು ಕೊಡುವುದಾಗಿದೆ. ಜಿಲ್ಲಾಧಿಕಾರಿಗಳ ಆಶಯದಂತೆ ಮಹಾನಗರ ಪಾಲಿಕೆ ವಹಿಸುತ್ತಿರುವ ಈ ಕ್ರಮದಿಂದಾಗಿ ಜಿಲ್ಲೆಯ ಶೈಕ್ಷಣಿಕ ನೆಲೆಯನ್ನು ಬಲಪಡಿಸುವ ಮತ್ತು ವಿದ್ಯಾರ್ಥಿಗಳ ಜೀವನಕ್ಕೆ ಹೊಸ ದಿಕ್ಕನ್ನು ನೀಡುವ ನಿರೀಕ್ಷೆಯಿದೆ ಎಂದು ಇದೆ ವೇಳೆ ಪಾಲಿಕೆಯ ಆಯುಕ್ತರಾದ ಜುಬಿನ್ ಅವರು ಸಲಹೆ ಮಾಡಿದರು.
ಸಭೆಯಲ್ಲಿ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಶಾಲೆಗಳ ಮುಖ್ಯ ಗುರುಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್