ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಲ್ಲದಿರುವ ಜಾರಿ ಸೇರಿಸಿ ಜಾತಿ ನಡುವೆ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ರೊಟ್ಟಿ ಸುಟ್ಡು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಬಿಜೆಪಿ ನಾಯಕರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಗಣತಿ ಕಾಯಿದೆ ಇದೆ. ಅದರ ಪ್ರಕಾರ ಕೇಂದ್ರ ಸರ್ಕಾರ ಗಣತಿ ಮಾಡುತ್ತದೆ. ರಾಜ್ಯ ಸರ್ಕಾರ ಸರ್ವೆ ಮಾಡಬಹುದು. ಆದರೆ, ಇವರು ಮನೆ ಮನೆಗೆ ಹೋಗುವುದು ಗಣತಿ ಕಾಯಿದೆಯ ವಿರುದ್ದ ಇದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಈ ಹಿಂದೆ ಕಾಂತರಾಜ ವರದಿ ಯಾಕೆ ಮಾಡಿಸಿದ್ದರು. ಅದನ್ನು ಯಾಕೆ ಜಾರಿ ಮಾಡುತ್ತಿಲ್ಲ ಎನ್ನುವುದನ್ನು ಜನರಿಗೆ ತಿಳಿಸಬೇಕು. ಕಾಂತರಾಜ್ ವರದಿ ಜಾರಿ ಮಾಡದಿರಲು ಕಾರಣ ಏನು ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲಿ ಕೇವಲ ಆರು ಧರ್ಮ ಇದೆ. ರಾಜ್ಯ ಸರ್ಕಾರ ಜಾತಿ ಸಮೀಕ್ಷೆಯಲ್ಲಿ ಇತರರು, ನಾಸ್ತಿಕರು ಅಂತ ಸೇರಿಸಿದ್ದಾರೆ. ನಾಸ್ತಿಕರಿಗೆ ಧರ್ಮ ಇಲ್ಲ. ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯತ ಅಂತ ಯಾಕೆ ಕಾಲಂ ಮಾಡಿದ್ದಾರೆ. ಮತಾಂತರ ಹೊಂದಿದವರಿಗೆ ಪ್ರತ್ಯೇಕ ಕಾಲಂ ಮಾಡಬೇಕು ಅಂತ ಯಾವ ಸಂವಿಧಾನದಲ್ಲಿ ಹೇಳಿದೆ. ಸಂವಿಧಾನದ ಬಗ್ಗೆ ಮಾತನಾಡುತ್ತ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಜಾತಿ ಸಮೀಕ್ಷೆಯಲ್ಲಿ ಬಹಳಷ್ಟು ಲೋಪಗಳಿವೆ ಎಂದು ಅನೇಕ ಸ್ವಾಮೀಜಿಗಳು ಹೇಳಿದ್ದಾರೆ. ಅವುಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂದರು.
ವೀರಶೈವ ಲಿಂಗಾಯತ ಸಮಾಜ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಜನರು ಜಾಗೃತರಾಗಿದ್ದಾರೆ. ನಿಮ್ಮ ರಾಜಕೀಯ ಹುನ್ನಾರಕ್ಕೆ ಅವರು ಬಲಿಯಾಗುವುದಿಲ್ಲ. 2018 ರಲ್ಲಿ ಜನರು ಒಮ್ಮೆ ಪಾಠ ಕಲಿಸಿದ್ದಾರೆ. ನಮ್ಮ ಧರ್ಮ ಮತ್ತು ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಈಗ ಮತ್ತೆ ಅದೆ ಕೆಲಸ ಮಾಡುತ್ತಿದ್ದಾರೆ. ಸಮಾಜ ಒಗ್ಗೂಡಿಸಿ ಆಡಳಿತ ಮಾಡುವುದನ್ನು ಬಿಟ್ಟು, ಸಮಾಜ ಒಡೆದು ತಮ್ಮ ರಾಜಕೀಯ ರೊಟ್ಟಿ ಸುಟ್ಡುಕೊಳ್ಳುವ ಕೆಲಸ ಮಾಡುತ್ತಿರುವುದನ್ನು ಜನರು ಸಂಪೂರ್ಣವಾಗಿ ತಿರಸ್ಕಾರ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa