ಕೊಪ್ಪಳ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗಂಗಾವತಿ ನಗರ ವ್ಯಾಪ್ತಿಯಲ್ಲಿ 2024 ರ ಸೆಪ್ಟೆಂಬರ್ 17 ರಂದು ಅಪ್ರಾಪ್ತ ಯುವಕನಿಗೆ ಮದುವೆ ಮಾಡಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ, ಪರಿಶೀಲನೆ ನಂತರ ಇದನ್ನು ಬಾಲ್ಯ ವಿವಾಹವೆಂದು ಪರಿಗಣಿಸಿ, ಬಾಲ್ಯವಿವಾಹಕ್ಕೆ ಬೆಂಬಲ, ಪ್ರೋತ್ಸಾಹ ನೀಡಿದವರು, ಸಹಕರಿಸಿದವರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 0187/2025 ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016 ರಡಿಯಲ್ಲಿ ಮಕ್ಕಳ ಸಹಾಯವಾಣಿಯ ಸಂಯೋಜಕರ ಮೂಲಕ ಸೆಪ್ಟೆಂಬರ್ 15 ರಂದು ದೂರು ದಾಖಲಿಸಲಾಗಿದೆ.
ಗಂಗಾವತಿ ನಗರ ವ್ಯಾಪ್ತಿಯಲ್ಲಿ 2024 ರ ಸೆಪ್ಟೆಂಬರ್ 17 ರಂದು ಅಪ್ರಾಪ್ತ ಯುವಕನಿಗೆ ವಿವಾಹ ಮಾಡಿದ್ದು, ವಿವಾಹವನ್ನು ಗಂಗಾವತಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿ, ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಆದರೆ ವಿವಾಹದ ಸಂದರ್ಭದಲ್ಲಿ ಯುವಕನಿಗೆ 20 ವರ್ಷ, 6 ತಿಂಗಳು ಏಳು ದಿನಗಳು ಆಗಿದ್ದು, ಅಪ್ರಾಪ್ತ ವಯಸ್ಸಿನ ಯುವಕನಿಗೆ ವಿವಾಹವನ್ನು ಮಾಡಿರುತ್ತಾರೆ. ಈ ವಿವಾಹ ಮಾಡಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿದುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ.ರಾಮತ್ನಾಳ ಅವರಿಗೆ ಮಾಹಿತಿ ನೀಡಲಾಗಿತ್ತು. ಆಯೋಗದ ಸದಸ್ಯರು ಈ ಬಗ್ಗೆ ವಿಚಾರಣೆ ನಡೆಸುವಂತೆ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಆಯೋಗದ ನಿರ್ದೇಶನದನ್ವಯ ವಿವಾಹ ನೋಂದಣಿ ಅರ್ಜಿ ಮತ್ತು ಸಲ್ಲಿಸಿದ ದಾಖಲಾತಿಗಳನ್ನು ಮತ್ತು ಶಾಲಾ ದಾಖಲಾತಿಗಳನ್ನು ಪರಿಶೀಲಿಸಲಾಗಿ ವಿವಾಹ ಸಂದರ್ಭದಲ್ಲಿ ಯುವಕನು ಅಪ್ರಾಪ್ತ ವಯಸ್ಕನೆಂದು ಕಂಡುಬಂದಿರುತ್ತದೆ. ಆದ್ದರಿಂದ ಬಾಲ್ಯವಿವಾಹಕ್ಕೆ ಬೆಂಬಲ, ಪ್ರೋತ್ಸಾಹ ನೀಡಿದವರು, ಸಹಕರಿಸಿದವರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಮಕ್ಕಳ ಸಹಾಯವಾಣಿಯ ಸಂಯೋಜಕರ ಮೂಲಕ ಪ್ರಕರಣ ದಾಖಲಿಸಲಾಗಿದೆ.
ಆದ್ದರಿಂದ ಅಪ್ರಾಪ್ತ ವಯಸ್ಸಿನವರಿಗೆ ವಿವಾಹ ಮಾಡಿದವರಿಗೆ, ಭಾಗವಹಿಸಿದವರಿಗೆ, ನೆರವೇರಿಸಿದವರಿಗೆ ಹಾಗೂ ಪ್ರೋತ್ಸಾಹಿಸಿದವರಿಗೆ ಕನಿಷ್ಟ 1 ರಿಂದ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.1 ಲಕ್ಷ ರೂಪಾಯಿ ದಂಡವನ್ನು ವಿಧಿಸಬಹುದಾಗಿದ್ದು, ಬಾಲ್ಯವಿವಾಹವನ್ನು ಮಾಡಿ ಶಿಕ್ಷೆಗೆ ಗುರಿಯಾಗಬೇಡಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್