ಕೋಲಾರ, ೧೫ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ ಯುವಕರು ದೇಶದ ಶಕ್ತಿಯಾಗಿರುತ್ತಾರೆ ಆದ್ದರಿಂದಲೇ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ಸಂಸದರಾದ ಎಂ.ಮಲ್ಲೇಶ್ ಬಾಬು ಹೇಳಿದರು.
ಕೋಲಾರ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಜ್ಯೋತಿ ಬೆಳಗಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನನ್ನ ಮತ ನನ್ನ ಹಕ್ಕು ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೪೦ ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತ ದೇಶವನ್ನು ಎಲ್ಲಾ ದೇಶಗಳ ಪ್ರಜಾಪ್ರಭುತ್ವದ ತಾಯಿ ಎಂದು ಕರೆಯುತ್ತಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ನಾವೆಲ್ಲರೂ ಬದ್ದರಾಗಿರಬೇಕು ಎಂದರು.
ನಮ್ಮ ದೇಶದ ಸಂವಿಧಾನದಲ್ಲಿ ಸಮಾನತೆ, ಸಹೋದರತ್ವ ಮತ್ತು ಭ್ರಾತೃತ್ವತೆಯನ್ನು ಹೊಂದಿದೆ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ಪ್ರಜೆಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಸದೃಢವಾಗಲು ಸಾಧ್ಯ ಎಂದರು.
ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹೆಚ್ಚಿನ ಮಹತ್ವವಿದೆ. ಯಾವುದೇ ರೀತಿಯ ಆಸೆ ಆಮಿಷಗಳಿಗೆ ಒಳಗಾಗಬಾರದು, ಸೂಕ್ತ ಅಭ್ಯರ್ಥಿಯನ್ನು ಗುರುತಿಸಿ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ ನಮ್ಮ ಭಾರತೀಯರಿಗೆ ಸುಲಭವಾಗಿ ಪ್ರಜಾಪ್ರಭುತ್ವ ದೊರಕಿದೆ ಆದುದರಿಂದ ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳು ಗೊತ್ತಾಗುತ್ತಿಲ್ಲ ಅನೇಕ ದೇಶಗಳು ತಮ್ಮ ಸ್ವತಂತ್ರಕ್ಕಾಗಿ ರಕ್ತಪಾತಗಳನ್ನು ಅನುಭವಿಸಿದೆ ಆದರೆ ನಮ್ಮ ಭಾರತ ದೇಶದಲ್ಲಿ ಆ ರೀತಿಯ ಘಟನೆಗಳು ಆಗಲಿಲ್ಲ ಆದ್ದರಿಂದ ಪ್ರಜಾಪ್ರಭುತ್ವ ಎಂಬುದು ಎಷ್ಟು ಮುಖ್ಯವಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಇಲ್ಲದಿದ್ದರೆ ಅಧಿಕಾರವಾಗಲಿ ಸ್ವಾತಂತ್ರ್ಯವಾಗಲಿ ಅವಕಾಶವಾಗಲಿ ಯಾವುದು ಸಹ ಸಾರ್ವಜನಿಕರಿಗೆ ಸಾಧ್ಯವಾಗುತ್ತಿರಲಿಲ್ಲ ಜನಪ್ರತಿನಿಧಿಗಳು ತಪ್ಪು ಮಾಡಿದರೆ ತಿದ್ದುವ ಶಕ್ತಿಯನ್ನು ಅಂಬೇಡ್ಕರ್ ಬರೆದಿರುವ ಸಂವಿಧಾನ ಪ್ರಜಾಪ್ರಭುತ್ವದಿಂದ ಸಾರ್ವಜನಿಕರಿಗೆ ಬಂದಿದೆ ಇದು ಭಾರತೀಯ ನಾಗರಿಕನ ಶಕ್ತಿಯಾಗಿದೆ ಆದ್ದರಿಂದ ನಾವು ಇದನ್ನು ಬಳಸಿಕೊಂಡು ಈ ಸಮಾಜವನ್ನು ಏಳಿಗೆಯೆತ್ತ ಕರೆದುಕೊಂಡು ಹೋಗಬೇಕು ಮತ್ತು ದೇಶವನ್ನು ಕಟ್ಟುವಂತಹ ಕೆಲಸವಾಗಬೇಕು ಎಂದರು.
ನಮ್ಮ ಭಾರತ ದೇಶದ ಅನೇಕ ತಜ್ಞರು ಸಮಾಜದಲ್ಲಿರುವಂತಹ ವ್ಯವಸ್ಥೆಯನ್ನು ಹೇಗಿದೆ ಹಾಗೆ ಒಪ್ಪಿಕೊಳ್ಳುತ್ತಿರಲಿಲ್ಲ ಅದರ ಅಂಕು ಡೊಂಕುಗಳನ್ನು ಪ್ರಶ್ನೆ ಮಾಡುವಂತಹ ಮನೋಭಾವಕ್ಕೆ ಕಾರಣವೇ ಪ್ರಜಾಪ್ರಭುತ್ವವಾಗಿದೆ, ಯಾರು ಸಮಾಜದಲ್ಲಿನ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿ ಪ್ರಶ್ನೆ ಮಾಡುವುದಿಲ್ಲವೋ ಅವರು ಅರಿವಿಲ್ಲದೆ ಪರೋಕ್ಷವಾಗಿ ಗುಲಾಮಗಿರಿಗೆ ಒಳಪಡುತ್ತಾರೆ ಆದ್ದರಿಂದಲೇ ವಿದ್ಯಾರ್ಥಿಗಳು ಈಗಿನಿಂದಲೇ ತಮ್ಮ ಶಾಲೆಗಳಲ್ಲಿ ಪಾಠ ಮಾಡುವಂತಹ ಸಂದರ್ಭದಲ್ಲಿ ತಾವು ತಮ್ಮ ಶಿಕ್ಷಕರಿಗೆ ಪ್ರಶ್ನೆ ಮಾಡಬೇಕು ಮತ್ತು ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರಶ್ನೆಮಾಡಿ ಧ್ವನಿ ಎತ್ತುವಂತಹ ಕೆಲಸವನ್ನು ಮಾಡಬೇಕು ಇಲ್ಲದಿದ್ದರೆ ನಾವು ಯಾರು ಸಹ ಪ್ರಜಾಪ್ರಭುತ್ವವನ್ನು ಗೌರವಿಸದಂತೆ ಕಾಣುತ್ತದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಒಂದಷ್ಟು ಅನಕ್ಷರತೆ ಬಡವರು ಇರಬಹುದು ಆದರೆ ನಮ್ಮ ದೇಶದ ಮೇಲೆ ಪರಕೀಯರು ನಡೆಸುವಂತಹ ಅಕ್ರಮವನ್ನು ಯಾವುದೇ ದೇಶದ ಮೇಲೆಯೂ ನಡೆದಿರುವುದಿಲ್ಲ ಆದರೂ ಯಾರೇ ವಿದೇಶಿಗರು ಬಂದರೂ ನಮ್ಮೊಂದಿಗೆ ಸೇರಿಸಿಕೊಂಡು ಮುನ್ನಡೆಯುವ ಶಕ್ತಿ ಇರುವುದರಿಂದಲೇ ಈ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಆದ್ದರಿಂದಲೇ ನಾವೆಲ್ಲರೂ ಸೇರಿ ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಇನ್ನಷ್ಟು ಬಲಪಡಿಸುವ ಕೆಲಸವನ್ನು ಮಾಡೋಣ ಎಂದು ತಿಳಿಸಿದರು.
ನನ್ನ ಮತ ನನ್ನ ಹಕ್ಕು ಮಾತ್ರವಲ್ಲದೆ ನಮ್ಮ ಜವಾಬ್ದಾರಿಯು ಆಗಬೇಕಾಗಿದೆ ಯಾಕೆಂದರೆ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವುದು ತಮ್ಮ ಕೈಯಲ್ಲಿ ಇರುತ್ತದೆ ಆದ್ದರಿಂದ ಜವಾಬ್ದಾರಿಯುತವಾಗಿ ತಾವು ಮತದಾನ ಮಾಡಿ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಬಂಗಾರಪೇಟೆ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಜಾ ಪ್ರಭುತ್ವ ದಿನಾಚರಣೆ ಘೋಷ ವಾಕ್ಯವಾದ ನನ್ನ ಮತ ನನ್ನ ಹಕ್ಕು ಎಂಬ ಘೋಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಸೈಕಲ್ ಜಾಥಾಗೆ ಚಾಲನೆ ನೀಡಿ ಜಿಲ್ಲಾಧಿಕಾರಿಗಳು ಸಹ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಬಂಗಾರಪೇಟೆ ವೃತ್ತ ,ಡುಂ ಲೈಟ್ ವೃತ್ತ,ಕ್ಲಾಕ್ ಟವರ್,ಹೊಸ ಬಸ್ ನಿಲ್ದಾಣ , ಅಮ್ಮಾವಾರಿ ಪೇಟೆ ಮಾರ್ಗವಾಗಿ ಟಿ ಚನ್ನಯ್ಯ ರಂಗಮಂದಿರ ತಲುಪಿದ ನಂತರ ವೇದಿಕೆ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ನಿಖಿಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ .ಪ್ರವೀಣ್ ಪಿ ಬಾಗೇವಾಡಿ, ಉಪವಿಭಾಗಾಧಿಕಾರಿ ಡಾ. ಎಸ್ ಮೈತ್ರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ರಮೇಶ್, ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ನಟೇಶ್ ,ನಗರಸಭೆ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.
ಚಿತ್ರ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಸಂಸದ ಮಲ್ಲೇಶ್ ಬಾಬು ಜ್ಯೋತಿ ಬೆಳಗಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್