ಗದಗ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಾಮಾಜಿಕ ಮಾಧ್ಯಮಗಳನ್ನು ಸಂವಹನ ಹಾಗೂ ಸಮಾಜ ಕಟ್ಟುವ ವೇದಿಕೆಯಾಗಿಸಬೇಕಾದರೆ, ಕೆಲವರು ಅದನ್ನೇ ದೇಶ ವಿರೋಧಿ ಚಟುವಟಿಕೆಗಳಿಗೆ ದುರುಪಯೋಗ ಮಾಡುತ್ತಿರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಗದಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈದ್ ಮಿಲಾದ್ ಹಬ್ಬದ ವೇಳೆ ಪಾಕ್ ಧ್ವಜವನ್ನು ಕಾರಿನ ನಂಬರ್ ಪ್ಲೇಟ್ ಸ್ಥಳದಲ್ಲಿ ಅಳವಡಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಘಟನೆ ಜಿಲ್ಲೆಯಾದ್ಯಂತ ಆಕ್ರೋಶ ಹುಟ್ಟಿಸಿದೆ.
ಘಟನೆ ಹೇಗೆ ಬೆಳಕಿಗೆ ಬಂತು?
ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ತನ್ನ ಕಾರಿನ ಫ್ರಂಟ್ ನಂಬರ್ ಪ್ಲೇಟ್ ಸ್ಥಾನದಲ್ಲಿ ಪಾಕ್ ಧ್ವಜ ಅಳವಡಿಸಿದ್ದ. ಕಾರ್‌ನಲ್ಲಿ ನಂಬರ್ ಬದಲು “5/9/2025” ಎಂಬ ದಿನಾಂಕ ಬರೆಯಲಾಗಿತ್ತು. ಈ ಅಸಹಜ ದೃಶ್ಯವನ್ನು ಫೋಟೋ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಗೆ ಅಪ್‌ಲೋಡ್ ಮಾಡಲಾಗಿದೆ. ಒಂದು ಐಡಿ ಮೂಲಕ ಪೋಸ್ಟ್ ಹಂಚಲ್ಪಟ್ಟಿದ್ದು, ಇನ್ನೊಂದು ಐಡಿಯಿಂದ ಅದನ್ನು ಮತ್ತಷ್ಟು ವೈರಲ್ ಮಾಡಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ, ಗದಗ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದರು.
ಪೊಲೀಸರ ಕ್ರಮ
ಸಮಾಜದಲ್ಲಿ ಶಾಂತಿ ಕದಡುವ, ದೇಶದ್ರೋಹಿ ಅಂಶವಿರುವ ಈ ಕೃತ್ಯವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 299 ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಬೆನ್ನತ್ತಿದ ಪೊಲೀಸರು, ಈ ಕೃತ್ಯದಲ್ಲಿ ಭಾಗಿಯಾದವರು ಇಬ್ಬರು ಅಪ್ರಾಪ್ತರು ಎನ್ನುವುದನ್ನು ಪತ್ತೆಹಚ್ಚಿದ್ದಾರೆ. 17 ವರ್ಷದ ಇಬ್ಬರು ಬಾಲಕರನ್ನ ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಯಿತು. ಸದ್ಯ ಅವರು ಬಾಲ ಮಂದಿರದಲ್ಲಿದ್ದಾರೆ.
ಸಾರ್ವಜನಿಕರ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ಪೋಸ್ಟ್ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. “ಹಬ್ಬದ ದಿನದಂದು ಪಾಕ್ ಧ್ವಜ ಪ್ರದರ್ಶನ ಮಾಡಿದರೆ ಅದು ಕೇವಲ ಕಾನೂನು ಉಲ್ಲಂಘನೆ ಅಲ್ಲ, ದೇಶದ ಸಮಗ್ರತೆಗೆ ಧಕ್ಕೆ ತರುವ ಗಂಭೀರ ಅಪರಾಧ” ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕ್ ಪ್ರೇಮಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪೊಲೀಸರ ಎಚ್ಚರಿಕೆ
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು, “ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಅಪ್ರಾಪ್ತರಿಂದ ನಡೆದಿರುವುದರಿಂದ ಹೆಚ್ಚಿನ ವಿವರಗಳನ್ನು ಹಂಚಲಾಗುವುದಿಲ್ಲ. ಆದರೂ, ದೇಶ ವಿರೋಧಿ ಚಟುವಟಿಕೆ ಹಾಗೂ ಸಮಾಜದ ಶಾಂತಿಗೆ ಧಕ್ಕೆ ತರುವ ಯಾವುದೇ ಪೋಸ್ಟ್ ಅಥವಾ ಕೃತ್ಯಗಳನ್ನು ಸಹಿಸಲಾಗುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. ಯುವಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ಕಿವಿಮಾತು ನೀಡಿದ್ದಾರೆ.
ಪಾಕ್ ಧ್ವಜ ಅಳವಡಿಸಿ ದೇಶ ವಿರೋಧಿ ಚಟುವಟಿಕೆ ತೋರಿಸಲು ಮುಂದಾದ ಇಬ್ಬರು ಬಾಲಕರು ತಮ್ಮ ಕಿಡಿಗೇಡಿತನಕ್ಕೆ ಪೊಲೀಸರ ಅತಿಥಿಯಾಗಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಹಾಗೂ ದೇಶದ ಏಕತೆ-ಅಖಂಡತೆಗೆ ಧಕ್ಕೆ ತರುವ ಕೃತ್ಯಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂಬ ಸಂದೇಶ ಸ್ಪಷ್ಟವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP