ಕೊಪ್ಪಳ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದ ಅಪರಾಧಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.30 ಸಾವಿರಗಳ ದಂಡವನ್ನು ವಿಧಿಸಿ ಶಿಕ್ಷೆ ಪ್ರಕಟಿಸಿದೆ.
ಕೊಪ್ಪಳ ನಗರದ ಶಿವಾನಂದ ಕಡಿ ಎಂಬ ವ್ಯಕ್ತಿಯು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಬಾಲಕಿಯ ತಂದೆ ಬಳಿ ಕೇಳಿದ್ದನು. ಆದರೆ ತಮ್ಮ ಮಗಳಿಗೆ ಇನ್ನೂ ಮದುವೆ ವಯಸ್ಸು ಆಗಿಲ್ಲ ಎಂದು ಬಾಲಕಿಯ ತಂದೆ ಮದುವೆಗೆ ಒಪ್ಪಿರಲಿಲ್ಲ.
ಬಾಲಕಿಯು ದಿನಾಂಕ:17-02-2022 ರಂದು ಬೆಳಿಗ್ಗೆ ಕೊಪ್ಪಳದ ಬಾಲಕಿಯರ ಪದವಿ ಪೂರ್ವ ಕಾಲೇಜು ಗೇಟಿನ ಬಳಿ ಬಂದಾಗ ಆರೋಪಿಯು ಮದುವೆಯಾಗೋಣ ಎಂದು ಬಲವಂತವಾಗಿ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿ ಜೀವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ತಮ್ಮ ಸಂಬ0ಧಿಕರ ಮನೆಗೆ ಕರೆದುಕೊಂಡು ಹೋಗಿ, ತಾವಿಬ್ಬರೂ ಮದುವೆಯಾಗಿದ್ದು, ಸ್ವಲ್ಪ ದಿನ ಇಲ್ಲಿಯೇ ಇದ್ದು, ಕೆಲಸ ಸಿಕ್ಕ ನಂತರ ಹೋಗುವುದಾಗಿ ಸುಳ್ಳು ಹೇಳಿ ಆ ಮನೆಯಲ್ಲಿ ಬಾಲಕಿಯೊಂದಿಗೆ ವಾಸವಿದ್ದನು. ಈ ಸಂದರ್ಭ ಬಾಲಕಿಯ ವಿರೋಧದ ನಡುವೆಯೂ ಹಲವಾರು ಬಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದನು.
ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಆರೋಪಿಯ ವಿರುದ್ದ ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಠಾಣೆಯ ಮುಖ್ಯಪೇದೆ ಶರಣಪ್ಪ ಪ್ರಥಮ ಹಂತದ ತನಿಖೆ ಮಾಡಿದ್ದರು. ಪಿಎಸ್‌ಐ ಯಲ್ಲಪ್ಪ ಹಾಗೂ ಪಿಐ ಸಿ.ಬಿ.ಚಿಕ್ಕೋಡಿ ಅವರು ಮುಂದಿನ ತನಿಖೆಯನ್ನು ನಿರ್ವಹಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಠಾಣೆಯ ಸಿಬ್ಬಂದಿ ಹನುಮಮತಗೌಡ ತನಿಖಾ ಸಹಾಯಕ ಕರ್ತವ್ಯ ನಿರ್ವಹಿಸಿದ್ದರು.
ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೋ) ಸಂ: 18/2022 ರಲ್ಲಿ ದಾಖಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿತನ ಮೇಲೆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ನಿರ್ಣಯಿಸಿ, ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.30,000/- ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಸೆಪ್ಟೆಂಬರ್ 8 ರಂದು ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (ಪೋಕ್ಸೋ) ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು. ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ ಹಾಗೂ ಬಾಳಪ್ಪ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್