ನವದೆಹಲಿ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಆಪರೇಷನ್ ಸಿಂಧೂರ್ ಯಶಸ್ಸಿನ ನಂತರ ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಸಂಸ್ಥೆ ದೇಶೀಯ ಮಟ್ಟದಲ್ಲಿ ಐದನೇ ತಲೆಮಾರಿನ ಮುಂದುವರಿದ ಮಧ್ಯಮ ಶ್ರೇಣಿಯ ಯುದ್ಧವಿಮಾನ ಅಭಿವೃದ್ಧಿಪಡಿಸಲು ಆಸಕ್ತಿ ತೋರಿದೆ.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜೊತೆಗೆ ಅದಾನಿ ಸಂಸ್ಥೆ ಸ್ಪರ್ಧೆಯಲ್ಲಿ ಭಾಗವಹಿಸಿದೆ.
ಈ ಕುರಿತು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶೀಷ್ ರಾಜವಂಶಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಣ್ಣ ಶಸ್ತ್ರಾಸ್ತ್ರಗಳು, ಕಾರ್ಟ್ರಿಡ್ಜ್‌ಗಳು, ವಿವಿಧ ಡ್ರೋನ್‌ಗಳು, ಆಂಟಿ-ಡ್ರೋನ್ ವ್ಯವಸ್ಥೆ ಹಾಗೂ ಯುಎವಿ ಗಳಲ್ಲಿ ಸಂಸ್ಥೆ ಜಾಗತಿಕ ಮಾನದಂಡ ಸಾಧಿಸಿದೆ ಎಂದು ಹೇಳಿದರು.
ಆಪರೇಷನ್ ಸಿಂಧೂರ್ ವೇಳೆ ಅವರ ತಯಾರಿತ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆ ಅತ್ಯುತ್ತಮವಾಗಿತ್ತು ಎಂದೂ ಅವರು ಹೇಳಿದರು.
ರಕ್ಷಣಾ ಕಾರಿಡಾರ್ ಅಡಿಯಲ್ಲಿ ಗ್ವಾಲಿಯರ್‌ನಲ್ಲಿ ಶಸ್ತ್ರಾಸ್ತ್ರ, ಕಾನ್ಪುರದಲ್ಲಿ ಕಾರ್ಟ್ರಿಡ್ಜ್, ಹೈದರಾಬಾದ್‌ನಲ್ಲಿ ಯುಎವಿ ಮತ್ತು ಡ್ರೋನ್ ತಯಾರಿಕೆ ನಡೆಯುತ್ತಿದೆ. ಮುಂದಿನ ತಿಂಗಳಲ್ಲಿ ಕಾನ್ಪುರ ಕಾರ್ಖಾನೆಯಲ್ಲಿ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳ್ಳಲಿದ್ದು, ಪ್ರೈಮರ್, 155 ಎಂಎಂ ಫಿರಂಗಿ ಶೆಲ್ ಹಾಗೂ ಕ್ಷಿಪಣಿ ಗನ್‌ಪೌಡರ್ ಉತ್ಪಾದನೆ ಪ್ರಾರಂಭವಾಗಲಿದೆ.
ರಾಜವಂಶಿ ಅವರು, ಇಂದಿನ ಯುದ್ಧಭೂಮಿಯು ಸಂಪೂರ್ಣವಾಗಿ ಬದಲಾಗಿದ್ದು, ಭವಿಷ್ಯದಲ್ಲಿ ಫೈಟರ್ ಜೆಟ್‌ಗಳಿಗಿಂತ ಡ್ರೋನ್‌ಗಳು ಹಾಗೂ ಕೃತಕ ಬುದ್ಧಿಮತ್ತೆಯ ಯಂತ್ರಗಳ ಪ್ರಾಬಲ್ಯ ಹೆಚ್ಚಲಿದೆ ಎಂದರು.
ಸರ್ಕಾರ ಇದೀಗ ರಕ್ಷಣಾ ಯೋಜನೆಗಳಿಗೆ ಕ್ರೆಡಿಟ್ ಲೈನ್ ತೆರೆಯುತ್ತಿರುವುದು ಮಹತ್ವದ ಬದಲಾವಣೆಯಾಗಿದೆ ಎಂದೂ ಅವರು ವಿವರಿಸಿದರು.
ಮುಂದಿನ ವರ್ಷಗಳಲ್ಲಿ ಮದ್ದುಗುಂಡು ತಯಾರಿಕೆಗಾಗಿ ಸಂಸ್ಥೆ ₹7,000 ಕೋಟಿ ಹೂಡಿಕೆ ಮಾಡುವುದಾಗಿ, ಜೊತೆಗೆ ಕ್ಷಿಪಣಿ ಉತ್ಪಾದನೆಗೂ 1 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗುವುದಾಗಿ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa