ಶಿವಮೊಗ್ಗ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಳೆಗಾಲ ಬಂದರೆ ಸಾಕು, ಮಲೆನಾಡಿನ ಮನೆ ಮನೆಗಳಲ್ಲಿ ತಯಾರಾಗುವ ಸವಿರುಚಿಯ ಅಡುಗೆ ಎಂದರೆ ಕೆಸುವಿನ ಪತ್ರೊಡೆ. ಹಸಿರು ಕೆಸುವಿನ ಎಲೆಗಳಲ್ಲಿ ಮಸಾಲೆ ಹಚ್ಚಿ, ಇಡ್ಲಿ ಪಾತ್ರೆಯಲ್ಲಿ ಬೇಯಿಸುವ ಈ ತಿಂಡಿ, ಮಳೆಗಾಲದ ದಿನಗಳಲ್ಲಿ ಜನರ ಮೆಚ್ಚಿನ ಆಹಾರವಾಗಿದೆ.
ಕೆಸುವಿನ ಎಲೆ, ನೆನೆಸಿದ ಅಕ್ಕಿ, ಹುಣಸೆ, ಮೆಣಸು, ಕೊತ್ತಂಬರಿ, ಮೆಂತ್ಯೆ, ಜೀರಿಗೆ, ಅರಿಶಿನ, ಬೆಲ್ಲ ಹಾಗೂ ಉಪ್ಪಿನಿಂದ ತಯಾರಾಗುವ ಮಸಾಲೆಯನ್ನು ಹಚ್ಚಿ, ಎಲೆಯನ್ನು ಮಡಚಿ ರೋಲ್ ಮಾಡುವುದು ಪತ್ರೊಡೆ ಮಾಡುವ ಪ್ರಮುಖ ಹಂತವಾಗಿದೆ.
ಅರ್ಧ ಗಂಟೆ ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ರುಚಿಕರ ಪತ್ರೊಡೆ ಸಿದ್ಧವಾಗುತ್ತದೆ. ಕೆಲವರು ಬಿಸಿ ಬಿಸಿ ಪತ್ರೊಡೆಯನ್ನು ತುಪ್ಪ ಅಥವಾ ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ಹುರಿದು ಸೇವಿಸುವುದೂ ಸಂಪ್ರದಾಯವಾಗಿದೆ.
ಮಲೆನಾಡಿನ ಹಳ್ಳಿಗಳಿಂದ ಹಿಡಿದು ನಗರಗಳವರೆಗೂ ಈ ವಿಶೇಷ ತಿಂಡಿಗೆ ವಿಶೇಷ ಬೇಡಿಕೆ ಕಂಡುಬರುತ್ತಿದ್ದು, ಮಳೆಗಾಲದಲ್ಲಿ ಮನೆಯ ಮಡಿಲುಗಳಲ್ಲಿ ಹರಡಿರುವ ಪತ್ರೊಡೆ ಪರಿಮಳವೇ ಹಬ್ಬದಂತ ವಾತಾವರಣವನ್ನು ಸೃಷ್ಟಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa