ಬಳ್ಳಾರಿ, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳು ಗ್ರಾಮದಲ್ಲಿ ನಡೆದ ಗಂಡ - ಹೆಂಡತಿಯ ಜಗಳದಲ್ಲಿ ಬಂದ ಹೆಂಡತಿಯ ತಮ್ಮನನ್ನೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಶನಿವಾರ ನಸುಕಿನಲ್ಲಿ ನಡೆದಿದೆ.
ಪೊಲೀಸರು ತಿಳಿಸಿದಂತೆ, ಮೃತನು ಮಹೇಶ್. ಬಸಯ್ಯ ಮತ್ತು ನಂದಿನಿ ದಂಪತಿಗಳು. 16 ವರ್ಷಗಳ ಹಿಂದೆ ಇವರಿಗೆ ವಿವಾಹವಾಗಿದ್ದು ಮೂರು ಮಕ್ಕಳನ್ನು ಹೊಂದಿದ್ದಾರೆ. ಬಸಯ್ಯನು ಮದ್ಯವ್ಯಸನಿಯಾಗಿ ಹೆಂಡತಿಯ ನಡತೆಯನ್ನು ಶಂಕಿಸಿ, ಜಗಳವಾಡುತ್ತಿದ್ದನು.
ನಂದಿನಿಯು ತವರು ಮನೆಯ ಬೆಂಬಲದಿಂದ ಕುಟುಂಬವನ್ನು ನಡೆಸುತ್ತಿದ್ದಳು. ಆದರೂ, ಬಸಯ್ಯನು ಅನಗತ್ಯವಾಗಿ ನಂದಿನಿಯ ಜೊತೆ ಜಗಳವಾಡುವುದು, ಹಲ್ಲೆ ಮಾಡುವುದು ಮಾಡುತ್ತಿದ್ದನು. ಬಸಯ್ಯ ಮತ್ತು ನಂದಿನಿಯ ಜಗಳದ ಮಧ್ಯೆ ಮಹೇಶ್ ಬಂದು ಬಸಯ್ಯನ ವಿರುದ್ಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲು ಸಹೋದರಿ ನಂದಿನಿಗೆ ನೆರವಾದನು.
ಪೊಲೀಸ್ ಠಾಣೆಯಲ್ಲ ದೂರು ದಾಖಲಿಸಿದ ನಂದಿನಿಯು ಸಂಬಂಧಿಕರ ಮನೆಗೆ ಹೋಗಿದ್ದು, ಮಹೇಶ್ ಊರಿಗೆ ಬಂದು, ತನ್ನ ಹೆಂಡತಿ - ಇಬ್ಬರು ಮಕ್ಕಳ ಜೊತೆ ತನ್ನ ಮನೆಯಲ್ಲಿ ಮಲಗಿದ್ದನು. ಶುಕ್ರವಾರ ರಾತ್ರಿ ವಿಪರೀತ ಕುಡಿದಿದ್ದ ಬಸಯ್ಯನು ಶನಿವಾರ ನಸುಕಿನಲ್ಲಿ ಮಹೇಶ್‍ನ ಮನೆಗೆ ಹೋಗಿ, ಬಾಗಿಲು ತೆರೆಯಿಸಿ ಮಹೇಶ್‍ನ ಮೇಲೆ ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಅವರು ಮೃತ ಮಹೇಶ್‍ನ ಮನೆಗೆ ಶನಿವಾರ ಭೇಟಿ ಮಾಡಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಆರೋಪಿಯನ್ನು ಶೀಘ್ರದಲ್ಲೆ ಬಂಧಿಸಲು ಸೂಚನೆ ನೀಡಿದ್ದಾರೆ.
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್