ಕೋಲಾರ, ೦೮ ಜುಲೈ (ಹಿ ಸ) :
ಆ್ಯಂಕರ್ : ಮಕ್ಕಳ ಶಿಕ್ಷಣದ ಹಕ್ಕು ಕಸಿಯದಿರಿ, ಓದುವ ವಯಸ್ಸಿನಲ್ಲಿ ಉದ್ಯೋಗ ಮಾಡಿಸುವುದು ಅಪರಾಧ ಮತ್ತು ಮಕ್ಕಳ ಮೇಲೆ ಹಲ್ಲೆ,ಲೈಂಗಿಕ ದೌರ್ಜನ್ಯ ನಡೆಸುವುದು ಪೋಕ್ಸೋ ಕಾಯಿದೆಯಡಿ ಅಪರಾಧವಾಗಿದ್ದು, ಮಕ್ಕಳು ಅಂತಹ ಘಟನೆ ನಡೆದರೆ ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಎಂದು ಕೆಜಿಎಫ್ ರಕ್ಷಣಾ ಘಟಕದ ಎ.ಅಶ್ವಿನಿ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪೋಕ್ಸೋ ಕಾಯಿದೆ, ಲೈಂಗಿಕ ದೌರ್ಜನ್ಯ, ಬಾಲವಿವಾಹ, ಬಾಲಕಾರ್ಮಿಕ ನಿಷೇಧ ಕಾಯಿದೆ ಕುರಿತು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಕ್ಕಳ ರಕ್ಷಣಾ ಘಟಕ ಮತ್ತಿತರ ಸಂಸ್ಥೆಗಳು ಮಕ್ಕಳ ರಕ್ಷಣೆಗಾಗಿ ಕೆಲಸ ಮಾಡುತ್ತಿವೆ, ಮಕ್ಕಳು ದೂರವಾಣಿ ಕರೆ ನೀಡಿದರೆ ಸಾಕು, ನಾವು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗುತ್ತೇವೆ, ಅಂತಹ ಸಂಕಷ್ಟಕ್ಕೆ ಒಳಗಾದ ಮಕ್ಕಳಿಗೆ ರಕ್ಷಣೆ ನೀಡುತ್ತೇವೆ ಎಂದು ತಿಳಿಸಿದರು.
ಮಕ್ಕಳಿಗೆ ಗುಡ್ ಟಜ್,ಬ್ಯಾಡ್ ಟಜ್ ಕುರಿತು ಮಾರ್ಗದರ್ಶನ ನೀಡಿದ ಅವರು, ಹೆಣ್ಣು ಮಕ್ಕಳು ಈ ಕುರಿತು ಹೆಚ್ಚಿನ ಗಮನವಹಿಸಿ, ನಿಮ್ಮ ರಕ್ಷಣೆಗೆ ಪೋಕ್ಸೋ ಕಾಯಿದೆ ಇದೆ ಎಂದು ತಿಳಿಸಿದರು.
ಬಾಲ್ಯ ವಿವಾಹ, ಮಾದಕ ವಸ್ತುಗಳ ನಿರ್ಮೂಲನೆ ,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದ ಅವರು, ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅರಿವುಂಟಾಗುವಂತೆ ಸಮಾಜಕ್ಕೆ ಸಂದೇಶಗಳನ್ನು ನೀಡುವಂತಾಗಬೇಕು ಎಂದರು.
ಬಾಲ ಕಾರ್ಮಿಕರಾಗಿ ಯಾರೇ ಕೆಲಸ ಮಾಡುತ್ತಿರುವುದು ಕಂಡು ಬಂದರೆ ಕೂಡಲೇ ಗಮನಕ್ಕೆ ತನ್ನಿ ಸಹಾಯವಾಣಿಗೆ ದೂರು ನೀಡಿ ಎಂದ ಅವರು, ಗ್ಯಾರೇಜ್, ಇಟ್ಟಿಗೆ ಕಾರ್ಖಾನೆ ಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ತಮ್ಮ ಮಕ್ಕಳನ್ನು ದುಡಿಸುತ್ತಿದ್ದರೆ ಅವರ ಮನ ವೊಲಿಸಿ ಶಾಲೆಗೆ ಸೇರಿಸುವ ಕೆಲಸವಾಗಬೇಕು ಎಂದರು.
ಬಾಲ್ಯವಿವಾಹದ ಜತೆಗೆ ಮಕ್ಕಳಿಗೆ ಬಾಲ್ಯವಿವಾಹನವೂ ಮಾರಕವಾಗಿದೆ, ಶಾಲೆಗೆ ಹೋಗುವ ಮಕ್ಕಳಿಗೆ ಮದುವೆ ಮಾಡಿದರೆ ಅಂತಹ ಮದುವೆಗೆ ಕಾರಣರಾದ ಪೋಷಕರಿಗೆ ಮಾತ್ರವಲ್ಲ, ಪುರೋಹಿತರಿಗೆ, ಮದುವೆಗೆ ಹೋದ ಎಲ್ಲರಿಗೂ ಶಿಕ್ಷೆ ಖಚಿತ ಎಂದು ಎಚ್ಚರಿಸಿದರು.
ಚಾಕೋಲೇಟ್ಗಳಲ್ಲಿ ಹೇರಾಯಿನ್, ಕೋಕಾ, ಮುಂತಾದ ಅಮಲು, ನಿಶೆ ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಿ ಕೊನೆಗೆ ಅವರನ್ನು ಸಮಾಜಘಾತುಕ, ಕಾನೂನು ಬಾಹಿರಾ ಕೃತ್ಯಗಳಲ್ಲಿ ತೊಡಗುವಂತೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ವಿಷಾದಿಸಿದರು.
ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ಮಾತನಾಡಿ, ಬಾಲ ಕಾರ್ಮಿಕರ ರಕ್ಷಣೆ ಅತಿ ಮುಖ್ಯವಾಗಿದೆ, ಅನೇಕ ಮಕ್ಕಳು ಶಾಲೆಗೆ ಬಾರದೇ ದುಡಿಮೆಗೆ ಹೋಗುತ್ತಿದ್ದು, ಇದಕ್ಕೆ ಕೆಲವು ಪೋಷಕರ ಒತ್ತಾಸೆಯೂ ಇದೆ ಎಂದು ತಿಳಿಸಿದರು.
ಒಂದೆರಡು ವರ್ಷ ಕಷ್ಟಪಟ್ಟು ಓದಿ ಇಡೀ ಜೀವನ ಸುಖಕರವಾಗಿರುವಂತೆ ಬಾಳಿ, ಕೇವಲ ಶೈಕ್ಷಣಿಕ ಸುಖದ ಆಸೆಗಾಗಿ ದುಶ್ಚಟಗಳಿಗೆ ಬಲಿಯಾದರೆ ಇಡೀ ಜೀವನ ನರಕವಾದೀತು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಸುಗುಣಾ, ಶ್ವೇತಾ, ರಮಾದೇವಿ, ಶ್ರೀನಿವಾಸಲು ಮತ್ತಿತರರಿದ್ದರು.
ಚಿತ್ರ : ಬಾಲ್ಯವಿವಾಹ,ಬಾಲಕಾರ್ಮಿಕತೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯಿದೆ ಕುರಿತು ಕೆಜಿಎಫ್ ನಗರದ ಮಕ್ಕಳ ರಕ್ಷಣಾ ಘಟಕದ ಅಶ್ವಿನಿ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ