ವಿಜಯಪುರ, 08 ಜುಲೈ (ಹಿ.ಸ.) :
ಆ್ಯಂಕರ್ : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜುಲೈ 14ರ ಬೆಳಿಗ್ಗೆ 11 ಗಂಟೆಗೆ ಇಂಡಿ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿರುವ ಇಂಡಿ ವಿಧಾನ ಸಭಾ ಕ್ಷೇತ್ರದ ನಾನಾ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಇಂಡಿ ಮತ್ತು ಚಡಚಣ ತಾಲೂಕಿನ 19 ಕೆರೆ ತುಂಬುವ ಯೋಜನೆ, ಜಲಜೀವನ ಮಿಷನ್ ಕಾಮಗಾರಿಗಳು, ಇಂಡಿ ನಗರದಲ್ಲಿ ನೂತನ ಶ್ರೀ ಸಿದ್ದೇಶ್ವರ ಬೃಹತ್ ವಾಣಿಜ್ಯ ಸಂಕೀರ್ಣ ಮಾರುಕಟ್ಟೆ, ಇಂಡಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಇಂಡಿ ನಗರದ ಪ್ರಗತಿ ಕಾಲೋನಿ ಸಿ.ಸಿ.ರಸ್ತೆ, ಇಂಡಿ ಮತಕ್ಷೇತ್ರದ ಹೊರ್ತಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿಗಳಿಗೆ ಹೆಚ್ಚುವರಿ ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆ, ಇಂಡಿ, ಮಿರಗಿ ಗ್ರಾಮದ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್, ಇಂಡಿ ನಗರದ ಹೀರೇಇಂಡಿ ಹನುಮಾನ ಗುಡಿಯಿಂದ ಜಲದಪ್ಪನ ಕೆರೆವರೆಗೆ ಹಳ್ಳದ ಅಭಿವೃದ್ಧಿ, ಆಳೂರ ಗ್ರಾಮದಲ್ಲಿ ಸರ್ವೆ ನಂ. 128 ರಲ್ಲಿ ಬಾಂದಾರ, ನಿಂಬಾಳ ಗ್ರಾಮದ ಸಣ್ಣ ನೀರಾವರಿ ಕೆರೆ ಅಭಿವೃದ್ಧಿ, ಹಿರೇಬೇವನೂರ ಗ್ರಾಮದ ಇಂಗು ಕೆರೆ ಅಭಿವೃದ್ಧಿ, ಹಡಲಸಂಗ ಗ್ರಾಮದ ಸಣ್ಣ ನೀರಾವರಿ ಕೆರೆ ಅಭಿವೃದ್ಧಿ, ಝಳಕಿ ಹಾಗೂ ಇಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು,ಸರಕಾರಿ ಪ್ರೌಢ ಶಾಲೆ ಕಟ್ಟಡ ಸಾತಲಗಾಂವ ಪಿ.ಆಯ್, ಇಂಡಿ ತಾಲೂಕಿನ 4 ಅಂಗನವಾಡಿ ಕಟ್ಟಡಗಳು, ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿಗಳ ವಸತಿ ಗೃಹ ಹಾಗೂ ಝಳಕಿ ಡಿಪ್ಲೋಮಾ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೇಳಿದರು.
ಹೊರ್ತಿ ಶ್ರೀ ರೇವಣಸಿದ್ದೇಶ್ವರ ಏತ ನಿರಾವರಿ ಯೋಜನೆ ಕಾಮಗಾರಿಗಳು, ತಿಡಗುಂದಿ ಶಾಖಾ ಕಾಲುವೆಯ ವಿಸ್ತರಣೆ ಕಿ.ಮೀ. 56.00 ರಿಂದ 65.58 ವರೆಗಿನ ವಿತರಣಾ ಜಾಲ ನಿರ್ಮಾಣದ ಕಾಮಗಾರಿ, ಚಡಚಣ-ಗಾಣಗಾಪೂರ (115 ಕಿ.ಮೀ.) ರಸ್ತೆ ಅಭಿವೃದ್ಧಿ (ಇಂಡಿ ಮತಕ್ಷೇತ್ರದ 48 ಕಿ.ಮೀ.), (ಪಡನೂರ-ಅಂಕಲಗಿ) ಭೀಮಾ ನದಿಗೆ ಸೇತುವೆ ಕಾಮಗಾರಿ, ಇಂಡಿ ರೈಲು ನಿಲ್ಯಾಣದಿಂದ ಹಲಸಂಗಿ ರಾಷ್ಟ್ರೀಯ ಹೆದ್ದಾರಿವರೆಗೆ ರಸ್ತೆ ಸುಧಾರಣೆ ಕಾಮಗಾರಿ (ಎನ್ ಎಚ್-52), ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ 34ರ ರಸ್ತೆ ಸುಧಾರಣೆ ಕಾಮಗಾರಿ, ಇಂಡಿ ಪಟ್ಟಣದಲ್ಲಿ ಜಿ.ಟಿ.ಟಿ.ಸಿ. ಕಾಲೇಜು ನಿರ್ಮಾಣ ಕಾಮಗಾರಿ, ಪ್ರಗತಿ ಪಥ ಯೋಜನೆಯಡಿ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ನೆರವೆರಿಸಲಿದ್ದಾರೆ.
ಸಂಬ0ಧಪಟ್ಟ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯಕ್ರಮ ನಿರ್ವಹಿಸಬೇಕು ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆಯೂ ಹಾಗೂ ನಾನಾ ಇಲಾಖೆಯ ಅಧಿಕಾರಿಗಳಿಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ಇಂಡಿ ಪಟ್ಟಣದಲ್ಲಿ ಆಯೋಜಿಸಲಾದ ನಾನಾ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿ ಆಯೋಜನೆಗೆ ಪೂರ್ವ ಸಿದ್ಧತೆ ಕೈಗೊಳ್ಳಬೇಕು. ಯಾವುದೇ ಲೋಪಗಳಿಗೆ ಆಸ್ಪದ ನೀಡದೇ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆ ಸಿದ್ಧತೆ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಇಂಡಿ ಪಟ್ಟಣ ಸ್ವಚ್ಛತೆ, ವೇದಿಕೆ ನಿರ್ವಹಣೆ, ವೇದಿಕೆ ಅಲಂಕಾರ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ್ ಮಾರಿಹಾಳ, ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತçದ, ಆಲಮಟ್ಟಿಯ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಬಸವರಾಜ, ರಾಂಪೂರ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ರವಿಶಂಕರ್, ಇಂಡಿ ಡಿವೈಎಸ್‌ಪಿ ಜಗದೀಶ್, ಇಂಡಿ ತಹಶೀಲ್ದಾರ ಬಿ.ಎಸ್.ಕಡಕಭಾವಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande