ಬಳ್ಳಾರಿ, 08 ಜುಲೈ (ಹಿ.ಸ.) :
ಆ್ಯಂಕರ್ : ಮಾಜಿ ಸಚಿವ ಎಚ್. ಆಂಜನೇಯ ಅವರು ಪರಿಶಿಷ್ಟ ಜಾತಿಯಲ್ಲಿರುವ 49 ಜಾತಿಗಳ ಮುಖಂಡರ ಸಭೆ ನಡೆಸುವಾಗ, ಕೊರಮ, ಕೊರಚ ಸಮಾಜದ ಮುಖಂಡರಾದ ಜಿ. ಪಲ್ಲವಿ ಅವರು ಏಕಾಏಕಿ ಸಭೆಗೆ ಬಂದು, ಗೊಂದಲ ಸೃಷ್ಟಿಸಿ ಗಲಾಟೆ ಮಾಡಿದ್ದಕ್ಕಾಗಿ ಅವರನ್ನು ಅಲೆಮಾರಿ, ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲು ಆಗ್ರಹಿಸಿ ದಲಿತ ಪರ ಸಂಘಟನೆಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿವೆ.
ಜಿ. ಪಲ್ಲವಿ ಅವರನ್ನು ಸಭೆಗೆ ಆಹ್ವಾನಿಸಿಲ್ಲ ಎಂಬ ಕಾರಣಕ್ಕಾಗಿ ಸಭೆಯ ಸ್ಥಳಕ್ಕೆ ಆಗಮಿಸಿ, ಗಲಾಟೆ ಮಾಡಿ ಎಚ್. ಆಂಜನೇಯಲು ಅವರ ವಿರುದ್ಧ ಮಾತನಾಡುವುದು ಸರಿಯಲ್ಲ. ಜಿ. ಪಲ್ಲವಿ ಅವರು ಪ್ರತ್ಯೇಕ ನಿಗಮಕ್ಕಾಗಿ ಹೋರಾಟ ಮಾಡಲಿ. ಆದರೆ, ಅಲೆಮಾರಿಗಳ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಹೋರಾಟದ ನೇತೃತ್ವವಹಿಸಿದ್ದ ಮಹೇಶ್ ಅವರು ತಿಳಿಸಿದ್ದಾರೆ.
ಅಲೆಮಾರಿ ಸಮುದಾಯದ ಮುಖಂಡರಾದ ನಾಗರಾಜ್, ದುರ್ಗೇಶ್, ನಾಗಲಿಂಗ, ಸತ್ಯಪ್ಪ, ಲಿಂಗಪ್ಪ, ಯಲ್ಲಪ್ಪ, ಕುಡತಿನಿ ರಮೇಶ್, ಮಂಜುನಾಥ್, ಭರತ್, ಹುಚ್ಚಪ್ಪ, ರಾಜೇಶ್ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್