ಮೋಕಾ, (ಬಳ್ಳಾರಿ), 08 ಜುಲೈ (ಹಿ.ಸ.) :
ಆ್ಯಂಕರ್ : ಕಣ್ಣಿನ ಸಮಸ್ಯೆ ಕಂಡುಬಂದಲ್ಲಿ ಗ್ರಾಮೀಣ ಭಾಗದ ಜನತೆಯು ಜಿಲ್ಲೆಯ ಆರೋಗ್ಯ ಕೇಂದ್ರಗಳ ದೃಷ್ಟಿಕೇಂದ್ರಗಳಲ್ಲಿ ನೇತ್ರ ಪರೀಕ್ಷೆ ಮಾಡಿಸಿಕೊಂಡು ಕಣ್ಣಿನ ಆರೈಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶಬಾಬು ಅವರು ತಿಳಿಸಿದ್ದಾರೆ.
ಮೋಕಾ ಸಮುದಾಯ ಆರೋಗ್ಯ ಕೇಂದ್ರದಲ್ಲಿಯ ದೃಷ್ಟಿಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ, ಕಣ್ಣಿನ ಪರೀಕ್ಷೆಯಲ್ಲಿ ಕನ್ನಡಕ ಪಡೆದುಕೊಂಡವರ ಜೊತೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ರಾಜ್ಯಾದ್ಯಂತ ಆಶಾಕಿರಣ ಯೋಜನೆಯನ್ನು ಜಾರಿ ಮಾಡಿದ್ದಾರೆ ಎಂದರು.
ಬಳ್ಳಾರಿಯ ಜಿಲ್ಲಾ ಆಸ್ಪತ್ರೆ, ಸಂಡೂರು, ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆ, ಮೋಕಾ, ರೂಪನಗುಡಿ, ಕಂಪ್ಲಿ, ಕುರುಗೋಡು, ತೋರಣಗಲ್ಲು, ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಮೋಕಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಭಾರತಿ, ದಂತ ತಜ್ಞ ಡಾ. ಅರ್ಜುಂ ಮುನ್ನಿಸಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನವರ, ದೃಷ್ಟಿಕೇಂದ್ರದ ನೇತ್ರಾಧಿಕಾರಿ ಮಂಜುನಾಥ, ಸಿಬ್ಬಂದಿ ವೈಷ್ಣವಿ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್