ಕೋಲಾರ, ೦೬ ಜುಲೈ (ಹಿ.ಸ) :
ಆ್ಯಂಕರ್ : ದೇಶ ಕಂಡ ಸಾಧಕರೆಲ್ಲಾ ಸರ್ಕಾರಿ ಶಾಲೆಯಲ್ಲೇ ಓದಿದವರು. ಕೀಳಿರಿಮೆ ತೊರೆದು ಮಕ್ಕಳನ್ನು ಇಲ್ಲಿ ದಾಖಲಿಸುವ ಮೂಲಕ ಸಮಾನ ಶಿಕ್ಷಣಕ್ಕೆ ಹಾನಿಯಾಗುವುದನ್ನು ತಪ್ಪಿಸುವ ಹೊಣೆ ಪೋಷಕರು,ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಕರೆ ನೀಡಿದರು.
ಜಿಲ್ಲೆಯ ಕಸೆಟ್ಟಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವತಿಯಿಂದ ೩.೧೦ ಲಕ್ಷ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್‌ಅನ್ನು ಉಚಿತವಾಗಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾನತೆ,ಸೌಹಾರ್ದತೆ ಬಲಗೊಳ್ಳಲು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು. ದಾನಿಗಳು ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಬಳಸಿ ಖಾಸಗಿ ಶಾಲೆಗಳ ಪೈಪೋಟಿಗೆ ಅನುಗುಣವಾಗಿ ಬಲವರ್ಧನೆ ಮಾಡಬೇಕು
ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗೆ ಸಮಾಜ, ಸಂಸ್ಥೆಗಳು ಕೈಜೋಡಿಸಬೇಕು, ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲಿಸಲು ಪೋಷಕರು ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ದಾನಿಗಳ ನೆರವು ಅಗತ್ಯವಿದ್ದು, ಖಾಸಗಿ ಪೈಪೋಟಿ ಸರ್ಕಾರಿ ಶಾಲೆಗಳನ್ನು ಇಂದು ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಈ ಶಾಲೆಗಳ ಬಡ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಸ್ಪರ್ಧಾತ್ಮಕ ಪೈಪೋಟಿಗೆ ಎದುರಾಗಿ ನಿಲ್ಲುವ ಶಕ್ತಿ ತುಂಬಿ ಬೆಳೆಸುವ ಅಗತ್ಯವಿದೆ ಎಂದರು.
ಕಲಿಕೆಗೆ ಬಡತನ ಅಡ್ಡಿಯಾಗದು, ನಿಮ್ಮಲ್ಲಿ ಸಾಧನೆಯ ಛಲ ಇರಬೇಕು, ಪರಿಶ್ರಮ,ಶ್ರದ್ಧೆ ಜತೆಗಿದ್ದರೆ ಎಂತಹ ಸಾಧನೆಯೂ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿ ಶಾಲೆಗ ಗೈರಾಗದಿರಿ ಎಂದು ಕಿವಿಮಾತು ಹೇಳಿದರು.
ವಿವಿಯ ಮೌಲ್ಯಮಾಪನ ಕುಲಸಚಿವ ಲೋಕನಾಥ್ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ, ಓದಿನ ಜತೆ ಶಿಸ್ತುಬದ್ದ ಜೀವನದ ಪಾಠ ಮಕ್ಕಳಿಗೆ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಸಿಕೊಳ್ಳಬೇಕು, ದಾಖಲಾತಿ ಉತ್ತಮಪಡಿಸಲು ಶ್ರಮಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಶಾಲೆಗೆ ಬರುವ ಮಕ್ಕಳು ಶಿಸ್ತು ರೂಢಿಸಿಕೊಳ್ಳಿ,ಪರಸ್ಪರ ದ್ವೇಷ,ಅಸೂಯೆ ತೊರೆದು ಎಲ್ಲರೂ ಸ್ನೇಹಿತರಂತೆ ಇರಬೇಕು, ಜಾತಿ,ಧರ್ಮದ ಎಲ್ಲೆ ಮೀರಿ ನಾವೆಲ್ಲಾ ಒಂದೇ ಎಂಬ ಪವಿತ್ರ ಭಾವನೆಯೊಂದಿಗೆ ಉತ್ತಮ ಸ್ನೇಹಿತರಾಗಿ ಕಲಿಕೆಯ ಧ್ಯೇಯ,ಗುರಿ ಸಾಧನೆಗೆ ಮುನ್ನಡಿ ಬರೆಯಬೇಕು,ಮೊಬೈಲ್,ಟಿವಿ ಅಗತ್ಯಕ್ಕಿಂತ ಹೆಚ್ಚು ಬಳಸದಿರಿ, ಅವುಗಳ ದಾಸರಾಗದಿರಿ ಎಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮ ದಲ್ಲಿ ಅಗಾನಾಗ್ ಸಂಸ್ಥೆಯ ಜಯರಾಮ್, ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು,ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಜರಿದ್ದರು.
ಚಿತ್ರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನವಾನಳ್ಳಿ ಕೋಲಾರ ಜಿಲ್ಲೆಯ ಕಸೆಟ್ಟಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವತಿಯಿಂದ ೩.೧೦ ಲಕ್ಷ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್‌ಅನ್ನು ಉಚಿತವಾಗಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್