ಬೆಂಗಳೂರು, 04 ಜುಲೈ (ಹಿ.ಸ.) :
ಆ್ಯಂಕರ್ : ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಡಿಸಿಎಫ್ ಚಕ್ರಪಾಣಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತು ಮಾಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಶಿಫಾರಸು ಮಾಡಿದ್ದಾರೆ.
ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿ ಸ್ವೀಕರಿಸಿ, ಪರಾಮರ್ಶಿಸಿದ ಸಚಿವರು, ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಈ ಶಿಫಾರಸು ಮಾಡಿದ್ದಾರೆ.
ವೇತನ ಪಾವತಿಸದಿರುವುದೂ ಕರ್ತವ್ಯಲೋಪ: ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೆ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟುಮಾಡಿದೆ. ಈ ಸಂಬಂಧ ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಶಿಫಾರಸು ಮಾಡಿ, ಇಲಾಖಾ ವಿಚಾರಣೆ ಮಾಡಲು ಶಿಫಾರಸು ಮಾಡಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿ ಮಾರ್ಚ್ನಿಂದ 3 ತಿಂಗಳ ವೇತನ ಪಾವತಿ ಆಗಿಲ್ಲ ಎಂದು ಜೂನ್ 23ರಂದು ಪ್ರತಿಭಟನೆ ನಡೆಸಿದ್ದರು. ಸಕಾಲದಲ್ಲಿ ವೇತನ ಸಿಗದೆ ಮುಂಚೂಣಿಯ ಸಿಬ್ಬಂದಿ ಕರ್ತವ್ಯ ವಿಮುಖರಾಗಲು ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸುಮಾರು 11 ವರ್ಷದ ತಾಯಿ ಹುಲಿ ಮತ್ತು 10-11 ತಿಂಗಳ 4 ಮರಿ ಹುಲಿಗಳ ಸಾವಿಗೆ ಹುಲಿ ದಾಳಿ ಮಾಡಿ ಕೊಂದ ಹಸುವಿನ ಮೃತದೇಹದೊಳಗೆ ಸೇಡು ತೀರಿಸಿಕೊಳ್ಳಲು ಸಿಂಪಡಿಸಲಾದ ರಾಸಾಯನಿಕ ಸಂಯುಕ್ತ ಕಾರಣ ಎಂಬುದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದು ಬಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa