ಹೊಸಪೇಟೆ, 04 ಜುಲೈ (ಹಿ.ಸ.) :
ಆ್ಯಂಕರ್ : ಸೀಳು ತುಟಿ ಮತ್ತು ಅಂಗುಳ ಮತ್ತು ಇತರ ಮುಖದ ವಿರೂಪ ಶಸ್ತ್ರಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿರುವುದು ಬಡವರ್ಗದ ಜನರಿಗೆ ತುಂಬಾ ಅನುಕೂಲವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ ನಾಯ್ಕ ಅವರು ಹೇಳಿದ್ದಾರೆ.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇಂಗಾ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿದ್ದ ಸೀಳು ತುಟಿ, ಸೀಳು ಅಂಗುಳ ಮತ್ತು ಮುಖದ ವಿರೂಪಗಳು ಕುರಿತು ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಸೇವೆಗಳ ಶಿಬಿರವನ್ನು ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.
ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸೀಳು ತುಟಿ, ಸೀಳು ಅಂಗುಳ ಮತ್ತು ಮುಖದ ವಿರೂಪಗಳ ಶಸ್ತ್ರ ಚಿಕಿತ್ಸೆಗಳ ಸೇವೆಗಳು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ. ಇದಕ್ಕಾಗಿ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಸೀಳು ತುಟಿ ಮತ್ತು ಅಂಗುಳಿನ ಶಸ್ತ್ರ ಚಿಕಿತ್ಸೆಯು ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಸಂಭವಿಸುವ ತುಟಿ ಅಥವಾ ಬಾಯಿಯ ಮೇಲ್ಛಾವಣಿಯಲ್ಲಿನ ಬೇರ್ಪಡುವಿಕೆಯನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ.
ಚೀಲೋಪ್ಲ್ಯಾಸ್ಟಿ (ತುಟಿ ದುರಸ್ತಿ) ಮತ್ತು ಪ್ಯಾಲಟೊಪ್ಲ್ಯಾಸ್ಟಿ (ಅಂಗುಳಿ ದುರಸ್ತಿ) ಸೇರಿದಂತೆ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಸಾಮಾನ್ಯವಾಗಿ ಜನನದ ಮೊದಲ ವರ್ಷದಲ್ಲಿ ಸಾಮಾನ್ಯ ನೋಟ ಮತ್ತು ಕಾರ್ಯವನ್ನು ಪುನಃಸ್ಥಾಪಿಸಲು ನಡೆಸಲಾಗುತ್ತದೆ. ಯಾವುದೇ ಉಳಿದಿರುವ ವಿರೂಪಗಳನ್ನು ಪರಿಹರಿಸಲು ಅಥವಾ ಮಾತು ಮತ್ತು ನೋಟವನ್ನು ಸುಧಾರಿಸಲು ನಂತರ ಹೆಚ್ಚಿನ ಶಸ್ತ್ರ ಚಿಕಿತ್ಸೆಗಳು ಬೇಕಾಗಬಹುದು.
ಸೀಳು ತುಟಿ ಮತ್ತು ಸೀಳು ಅಂಗುಳವು ಮಗುವಿನ ಮೇಲಿನ ತುಟಿ ಅಥವಾ ಬಾಯಿಯ ಮೇಲ್ಭಾಗದಲ್ಲಿ (ಅಂಗುಳ) ತೆರೆಯುವಿಕೆಗಳಾಗಿವೆ. ಅವು ಗರ್ಭಾಶಯದಲ್ಲಿ ಭ್ರೂಣವು ಬೆಳವಣಿಗೆ ಹೊಂದುವಾಗ ರೂಪುಗೊಳ್ಳುವ ಜನ್ಮಜಾತ ಅಸಹಜತೆಗಳು (ಜನ್ಮ ದೋಷಗಳು). ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಮೇಲಿನ ತುಟಿ ಮತ್ತು ಬಾಯಿಯ ಮೇಲ್ಭಾಗದ ಅಂಗಾಂಶಗಳು ಸರಿಯಾಗಿ ಒಟ್ಟಿಗೆ ಸೇರದಿದ್ದಾಗ ಸೀಳು ತುಟಿ ಮತ್ತು ಸೀಳು ಅಂಗುಳಗಳು ಸಂಭವಿಸುತ್ತವೆ. ಶಸ್ತ್ರಚಿಕಿತ್ಸೆಯು ಸೀಳು ತುಟಿ ಅಥವಾ ಸೀಳು ಅಂಗುಳನ್ನು ಸರಿಪಡಿಸಬಹುದು ಎಂದರು.
ಆರ್‍ಸಿಹೆಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸತತವಾಗಿ ಹತ್ತು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಮುಖದ ವಿರೂಪಗಳು ಮತ್ತು ಸೀಳು ತುಟಿ, ಸೀಳು ಅಂಗುಳದ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗಿದೆ. ಕಳೆದ ವರ್ಷ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ 43 ಮುಖದ ವಿರೂಪಗಳು ಮತ್ತು 25 ಸೀಳು ತುಟಿ, ಸೀಳು ಅಂಗುಳಗಳ ಉಚಿತ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ. ಫಲಾನುಭವಿಗಳು ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಇಂಗಾ ಫೌಂಡೇಶನ್ ಅಧ್ಯಕ್ಷರಾದ ಆಡಿ ಚೇತನ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್‍ಬಿಎಸ್‍ಕೆ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು, ಸಾಧ್ಯಾ ಟ್ರಸ್ಟ್ ನ ಸಿಬ್ಬಂದಿಗಳು, ಜಿಲ್ಲಾ ಫಲಾನುಭಾವಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್