ಕೋಲಾರ, ೩೦ ಜುಲೈ : (ಹಿ.ಸ.) :
ಆ್ಯಂಕರ್ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವವು ಆಗಸ್ಟ್ ೧ ರಂದು ಬೆಳಿಗ್ಗೆ ೧೧ ಗಂಟೆಗೆ ಕೋಲಾರದ ನಂದಿನಿ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಲಿದ್ದು, ಸಾಧನೆ ಮಾಡಿರುವ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಕಾರ್ಯದರ್ಶಿಗಳಾದ ಶೇಷಾದ್ರಿಪುರಂ ಶೈಕ್ಷಣಿಕ ನ್ಯಾಸದ ಡಾ. ವೂಡೆ.ಪಿ.ಕೃಷ್ಣ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾಗೂ ಸಮಕುಲಾಧಿಪತಿಗಳೂ ಆದ ಡಾ.ಎಂ.ಸಿ. ಸುಧಾಕರ್ ಅವರು ಘಟಿಕೋತ್ಸವದಲ್ಲಿ ಉಪಸ್ಥಿತರಿರಲಿದ್ದಾರೆ.
ಡಾ.ಎಚ್.ಎಸ್.ಶೆಟ್ಟಿ ಅವರು ಸಮಾಜ ಸೇವೆಯಲ್ಲಿ ಕೊಡುಗೈ ದಾನಿಯಾಗಿ ಹೆಸರು ಮಾಡಿದ್ದಾರೆ. ಸೂರಿಲ್ಲದ ನೂರು ಜನ ಕೊರಗ ಸಮುದಾಯದವರಿಗೆ ತಮ್ಮ ಸ್ವಂತ ಖರ್ಚಿನಿಂದ ಮನೆಗಳನ್ನು ಕಟ್ಟುತ್ತಿದ್ದಾರೆ. ಈವರೆಗೆ ತಮ್ಮ ದುಡಿಮೆಯಲ್ಲಿ ಸುಮಾರು ರೂ.೫೦ ಕೋಟಿಗಳನ್ನು ಸಮಾಜ ಸೇವೆಗೆ ನೀಡಿದ್ದಾರೆ. ಇವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪಿಚ್ಚಳ್ಳಿ ಶ್ರೀನಿವಾಸ್ ಅವರು ಸಂಗೀತ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಧಾಕೃಷ್ಣ ಅಡಿಗ ಅವರು ಬೆಂಗಳೂರಿನ ಪ್ರತಿಷ್ಠಿತ “ಬ್ರಾಹ್ಮಿನ್ಸ್ ಕಾಫಿ ಬಾರ್”ನ ಮಾಲೀಕ, ಉದ್ಯಮಶೀಲತೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿವಿಧ ಪದವಿಗಳಲ್ಲಿ ಮೊದಲ ರ್ಯಾಂಕ್ ಗಳಿಸಿದ ೪೬ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು, ಕುಲಾಧಿಪತಿಗಳು ಬಂಗಾರದ ಪದಕ ವಿತರಿಸಲಿದ್ದಾರೆ. ಈ ವರ್ಷ ಒಟ್ಟು ೨೩೧೨೬ ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಸ್ನಾತಕ-೧೨೫೫೦, ಸ್ನಾತಕೋತ್ತರ-೪೦೦೨, ಬಿ.ಇಡಿ & ಬಿ.ಪಿ.ಇಡಿ -೨೫೦೫, ಸ್ವಾಯತ್ತ ಕಾಲೇಜು-೪೦೬೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಧಾಕೃಷ್ಣ ಅಡಿಗ ಬೆಂಗಳೂರಿನ ಹೆಸರಾಂತ ಹೋಟೆಲ್ ಉದ್ಯಮಿಗಳ ಕುಟುಂಬದಲ್ಲಿ ೦೧ ನೇ ಆಗಸ್ಟ್ ೧೯೬೩ ರಂದು ಜನಿಸಿರುತ್ತಾರೆ. ಇವರು ಒಂಬತ್ತನೇ ವಯಸ್ಸಿನಲ್ಲೇ ಅಪ್ಪನ “ಬ್ರಾಹ್ಮಿನ್ಸ್ ಕಾಫಿ ಬಾರ್” ನಲ್ಲಿ ಕೆಲಸ ಆರಂಭಿಸಿರುತ್ತಾರೆ. ಕಳೆದ ೫೦ ವರ್ಷಗಳಿಂದ ತಮ್ಮತಂದೆಯವರು ಆರಂಭಿಸಿದ ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ಹಾಗೂ ಜನಪ್ರಿಯವಾಗಿ ನಡೆಸಿಕೊಂಡು ಬಂದಿರುತ್ತಾರೆ. ತಿರುಪತಿ ವೆಂಕಟೇಶ್ವರನ ಅಖಂಡ ಭಕ್ತರಾಗಿ ಸೇವೆ ಸಲ್ಲಿಸಿದ ಇವರು ತಿರುಪತಿ, ಕೊಲ್ಲೂರು ಮತ್ತು ಶಂಕರನಾರಾಯಣ ದೇವಾಲಯಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಿರುತ್ತಾರೆ. ಈಗಾಗಲೇ ಇವರು ಆರ್ಯಭಟ ಪ್ರಶಸ್ತಿ ಮತ್ತು ಕೆಂಪೇಗೌಡ ಪ್ರಶಸ್ತಿ ಗಳಿಸಿರುತ್ತಾರೆ.
ಇವರ ಸೇವೆಯನ್ನು ಗುರುತಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಐದನೇಘಟಿಕೋತ್ಸವದ ಶುಭಗಳಿಗೆಯಲ್ಲಿ ಇವರಿಗೆ“ಉದ್ಯಮಶೀಲತೆ”ಯ ವಿಭಾಗಕ್ಕೆ ಡಿ.ಲಿಟ್ ಪದವಿ ನೀಡಿಗೌರವಿಸಲಿದೆ.
ಡಾ. ಹೆಚ್.ಎಸ್. ಶೆಟ್ಟಿ ೧೯ನೇ ಜುಲೈ ೧೯೫೯ ರಲ್ಲಿ ಜನಿಸಿದ ಇವರು ಕೆಲಸಕ್ಕಾಗಿ ಸಣ್ಣ ವಯಸ್ಸಿನಲ್ಲೇ ಮುಂಬೈ ಸೇರಿ ಅಲ್ಲಿಂದ ಬಹ್ರೇನ್ಗೆ ಹೋಗಿ, ಮತ್ತೆ ವಾಪಸ್ಸು ಬೆಂಗಳೂರಿಗೆ ಬಂದು, ಮೈಸೂರು ಮೆಕ್ರ್ಯಾಂಟೈಲ್ ಕಂಪನಿ ಲಿ. ಎಂಬ ಕಂಪನಿಯನ್ನು ಸ್ಥಾಪಿಸಿ ಈಗ ಅದು ವಾರ್ಷಿಕ ರೂ.೫೦ ಕೋಟಿಗಳಿಗೂ ಹೆಚ್ಚು ವ್ಯವಹಾರ ಮಾಡಲು ಕಾರಣರಾಗಿರುತ್ತಾರೆ. ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಕರ್ನಾಟಕದ ಅತ್ಯುತ್ತಮ ರಫ್ತುದಾರರಾಗಿ ಪ್ರಶಸ್ತಿ ಪಡೆದಿರುತ್ತಾರೆ. ಇವರ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು, ತಂದೆ ಹೆಗ್ಗುಂಜೆ ರಾಜೀವ್ ಶೆಟ್ಟಿಯವರ ಹೆಸರಿನಲ್ಲಿ ಸ್ಥಾಪಿಸಿರುವ ಚಾರಿಟೇಬಲ್ ಟ್ರಸ್ಟ್, ದಕ್ಷಿಣ ಕನ್ನಡದ ಸೂರಿಲ್ಲದ ಕೊರಗರಿಗೆ ನೂರು ಮನೆಗಳನ್ನು ಕಟ್ಟಿಕೊಡುವ ಬೃಹತ್ ಕಾರ್ಯಕ್ಕೆ ಕೈ ಹಾಕಿರುತ್ತಾರೆ. ರಾಜ್ಯದ ೪೦,೦೦೦ ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ನೀಡಿ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ. ರಾಜ್ಯದ ಪ್ರಪ್ರಥಮ ಖಾಸಗಿ ಪಾಲುದಾರತ್ವದ ಸರ್ಕಾರಿ ಶಾಲೆಯ ಸ್ಥಾಪನೆಗೆ ಕಾರಣರಾಗಿರುತ್ತಾರೆ.
ಇವರ ಸೇವೆಯನ್ನು ಗುರುತಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಐದನೇ ಘಟಿಕೋತ್ಸವದ ಶುಭಗಳಿಗೆಯಲ್ಲಿ ಇವರಿಗೆ “ಸಮಾಜ ಸೇವಾ” ವಿಭಾಗಕ್ಕೆ ಡಿ.ಲಿಟ್ ಪದವಿ ನೀಡಿ ಗೌರವಿಸಲಿದೆ.
ಪಿಚ್ಚಳ್ಳಿ ಶ್ರೀನಿವಾಸ್ ೧ ನೇ ಜೂನ್ ೧೯೬೩ ರಲ್ಲಿ ಕೋಲಾರ ಜಿಲ್ಲೆಯಲ್ಲಿ ಜನಿಸಿದ ಇವರು ಹಾಡುಗಾರರಾಗಿ, ನಾಟಕಕಾರರಾಗಿ ಇದುವರೆಗೂ ಮಾಡಿರುವ ಸಾಧನೆ ಅಪ್ರತಿಮವಾದದು. ರಂಗಭೂಮಿಯ ಭೀಷ್ಮ ಎನಿಸಿಕೊಂಡ ಬಿ.ವಿ.ಕಾರಂತರಿಂದ ಆಯ್ಕೆಗೊಂಡು ಮೈಸೂರಿನ ರಂಗಾಯಣ ಕಲಾವಿದರಾಗಿ ಸೇವೆಗೈದ ಇವರು ರಂಗಾಯಣ ಅರ್ಪಿಸಿದ ಅನೇಕ ನಾಟಕಗಳಲ್ಲಿ ಮುಖ್ಯ ಪಾತ್ರಧಾರಿಗಳಾಗಿ ಹಾಗೂ ಸಂಗೀತ ಕಲಾವಿದರಾಗಿಇವರು ಸೇವೆ ಸಲ್ಲಿಸಿರುತ್ತಾರೆ. ಇವರ “ಸಾರಂಗರಂಗ” ಸಂಸ್ಥೆಯ ಮೂಲಕ ಇವರು ಮಾಡುತ್ತಿರುವ ಕಲಾ ಮತ್ತು ಸಂಸ್ಕೃತಿ ಸೇವೆ ಅನನ್ಯವಾದುದು. ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿರುತ್ತಾರೆ. ಕರ್ನಾಟಕ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಇವರ ಸೇವೆಯನ್ನು ಗುರುತಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಐದನೇ ಘಟಿಕೋತ್ಸವದ ಶುಭಗಳಿಗೆಯಲ್ಲಿ ಇವರಿಗೆ “ಸಂಗೀತ ಮತ್ತು ರಂಗಭೂಮಿ” ವಿಭಾಗಕ್ಕೆ ಡಿ.ಲಿಟ್ ಪದವಿ ನೀಡಿ ಗೌರವಿಸಲಿದೆ ಎಂದು ತಿಳಿಸಿದರು.
ಚಿತ್ರ : ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್