ಕೋಲಾರ, ೩೧ ಜುಲೈ (ಹಿ.ಸ.) :
ಆ್ಯಂಕರ್ : ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹಿಂದಿನ ಕಾರ್ಯದರ್ಶಿಯಾಗಿದ್ದ (ಪ್ರಸ್ತುತ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ) ಎನ್ ವಿಜಯಲಕ್ಷ್ಮಿ ರವರ ಮೇಲೆ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಹಿವಾಟು ನಡೆಸುವ ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರನ್ನೊಳಗೊಂಡಂತೆ ೬೩ ಜನ ಸಹಿ ಮಾಡದ ಪತ್ರದಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಹಾಗೂ ಇನ್ನು ಇತರೆ ಗುರುತರವಾದ ಆರೋಪಿಗಳನ್ನು ಮಾಡಿ, ಕಾರ್ಯದರ್ಶಿ ಯವರನ್ನು ವರ್ಗಾವಣೆ ಮಾಡಬೇಕೆಂದು ಇಲಾಖೆಯ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿತ್ತು.
ಈ ವಿಚಾರವಾಗಿ ಮೇಲಾಧಿಕಾರಿಗಳು ವಿಜಯಲಕ್ಷ್ಮಿ ರವರ ಮೇಲೆ ಇಲಾಖಾ ತನಿಖೆಗೆ ಆದೇಶ ಮಾಡಿ, ವರ್ಗಾವಣೆ ಮಾಡಲಾಗಿತ್ತು. ತನಿಖಾಧಿಕಾರಿಗಳಾಗಿ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಎಸ್ ತಡವಾಳ್ ಹಾಗೂ ಕೃಷಿ ಮಾರಾಟ ಇಲಾಖೆ ಅಧೀಕ್ಷಕ ಕೆ.ಸಿ. ಶಿವಶಂಕರ್ ರವರನ್ನು ನೇಮಕ ಮಾಡಲಾಗಿತ್ತು.
ಪ್ರಕರಣದಲ್ಲಿ ತನಿಖಾಧಿಕಾರಿಗಳು ದೂರುದಾರರು ಮತ್ತು ಆರೋಪಿತರನ್ನು ವಿಚಾರಣೆ ನಡೆಸಿ ದೂರುದಾರರು ಆರೋಪಗಳನ್ನು ಸಾಬೀತುಪಡಿಸವಲ್ಲಿ ವಿಫಲವಾಗಿರುತ್ತಾರೆಂದು ಎನ್. ವಿಜಯಲಕ್ಷ್ಮಿ, ಹಿಂದಿನ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೋಲಾರ ಇವರನ್ನು ದೋಷ ಮುಕ್ತಗೊಳಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವ್ಯವಹಾರ ನಡೆಸುವ ದಲ್ಲಾಳಿಗಳು ಮಾಡಿದ ಆರೋಪ ಸಾಬೀತಾಗದೆ, ತರಕಾರಿ ದಲ್ಲಾಳರ ಸಂಘಕ್ಕೆ ಮುಖಭಂಗವಾಗಿರುತ್ತದೆ.
ತರಕಾರಿ ಮಾರುಕಟ್ಟೆಯನ್ನು ಅನಧಿಕೃತವಾಗಿ ಶನಿವಾರ ರಜೆ ಮಾಡುವುದು, ರೈತರಿಂದ ಕಮೀಷನ್ ಪಡೆಯುವುದನ್ನು. ಇಲಾಖೆಗೆ ಬರಬೇಕಾದ ನಿಗದಿತ ಹಣ ಕಟ್ಟದೆ ತಪ್ಪು ಲೆಕ್ಕ ನೀಡುತ್ತಿದ್ದನ್ನು ಪ್ರಶ್ನೆ ಮಾಡಿದ್ದೇ ತಪ್ಪು ಎಂದು ಮೇಲಾಧಿಕಾರಿಗಳಿಗೆ ಸುಳ್ಳು ದೂರು ನೀಡಿದ ದಲ್ಲಾಳರ ಸಂಘಕ್ಕೆ ಮುಖಭಂಗವಾಗಿರುತ್ತದೆ. ಮಾರುಕಟ್ಟೆ ಯಾರ್ಡ್ ಸಂಖ್ಯೆ ೧೨೩ರ ಮೂಲ ವಾರಸುದಾರರಾದ ಶೌಕತ್ ರವರ ಹೆಸರಿನಿಂದ ನಮ್ಮ ಹೆಸರಿಗೆ ಮಾಡಿಕೊಡುವಂತೆ ಕೆಲವು ದಲ್ಲಾಳಿಗಳು ಕಾರ್ಯದರ್ಶಿ ರವರಿಗೆ ಒತ್ತಾಯಿಸಿದ್ದು, ಕಾರ್ಯದರ್ಶಿ ರವರು ಶೌಕತ್ ರವರ ಮೂಲ ವಾರಸುದಾರರ ಹೆಸರಿಗೆ ಶುದ್ಧ ಕ್ರಯ ಪತ್ರ ಮಾಡಿ ಕೊಟ್ಟಿದ್ದಕ್ಕೆ, ಅವರು ಗುಂಪುಕಟ್ಟಿಕೊಂಡು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು.
ಈಗಲೂ ಸಹ ಶನಿವಾರ ರಜೆ ಮಾಡುತ್ತಿರುವುದು ರೈತರಿಗೆ ತುಂಬಾ ತೊಂದರೆ ಆಗುತ್ತಿದೆ, ಶನಿವಾರದ ರಜೆಯನ್ನು, ರೈತರಿಂದ ಕಮೀಷನ್ ಪಡೆಯುವುದನ್ನು ಕೂಡಲೇ ನಿಲ್ಲಿಸಬೇಕು. ತಪ್ಪಿದಲ್ಲಿ ಜಿಲ್ಲೆಯ ರೈತರನ್ನು ಸಂಘಟಿಸಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ಕೆ. ಆನಂದಕುಮಾರ್, ಯುವ ಮುಖಂಡರಾದ ತಾರಕ್ ಮಂಜುನಾಥ, ನಾಗನಾಳ ರಮೇಶ್, ದಿನ್ನೆ ಹೊಸಹಳ್ಳಿ ರಮೇಶ್, ಚಂದ್ರಪ್ಪ, ಸೀಸಂದ್ರ ಚಲಪತಿ ಇನ್ನು ಇತರರು ಎಚ್ಚರಿಸಿದ್ದಾರೆ.
ಚಿತ್ರ : ರೈತ ಮುಖಂಡ ಅಬ್ಬಣಿ ಶಿವಪ್ಪ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್