‘ಕಾಯಕಯೋಗಿ’ ಪ್ರಾಂಶುಪಾಲ ಬಾಲಕೃಷ್ಣರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
‘ಕಾಯಕಯೋಗಿ’ ಪ್ರಾಂಶುಪಾಲ ಬಾಲಕೃಷ್ಣರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಚಿತ್ರ : ಕೋಲಾರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಿವೃತ್ತರಾದ ಬಾಲಕೃಷ್ಣ ಅವರನ್ನು ಸ್ನೇಹಿತರು, ವಿದ್ಯಾರ್ಥಿಗಳು,ಉಪನ್ಯಾಸಕರು ಬೀಳ್ಕೊಟ್ಟರು.


ಕೋಲಾರ, 31 ಜುಲೈ (ಹಿ.ಸ.) :

ಆ್ಯಂಕರ್ : ಸರ್ಕಾರಿ ಕಾಲೇಜೊಂದನ್ನು ಇಡೀ ಸಮಾಜವೇ ಹುಬ್ಬೇರಿಸಿ ನೋಡುವಂತೆ ಅಭಿವೃದ್ದಿಪಡಿಸಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ರೀತಿಯಲ್ಲಿ ವಿದ್ಯಾರ್ಥಿಸ್ನೇಹಿ ಉಪನ್ಯಾಸಕರು, ಪ್ರಾಂಶುಪಾಲರು,ಇಲಾಖೆಯ ಉಪನಿರ್ದೇಶಕರಾಗಿ ಕಾಯಕಯೋಗಿಯಂತೆ ದುಡಿದು ಗುರುವಾರ ನಿವೃತ್ತರಾದ ಬಾಲಕೃಷ್ಣ ಅವರನ್ನು ನೂರಾರು ಮಂದಿ ಸ್ನೇಹಿತರು,ವಿದ್ಯಾರ್ಥಿಗಳು,ಉಪನ್ಯಾಸಕರು ಭಾವಪೂರ್ವವಾಗಿ ಬೀಳ್ಕೊಟ್ಟರು.

ಗುರುವಾರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮೋ ಸಂಭ್ರಮ, ಇಡೀ ಕಾಲೇಜು ಅಲಂಕೃತಗೊಂಡಿದ್ದು, ವಿದ್ಯಾರ್ಥಿನಿಯರೂ ಸಹಾ ಹೊಸ ಉಡುಗೆ ತೊಟ್ಟು ಹಬ್ಬಕ್ಕೆ ಬಂದವರಂತೆ ಖುಷಿಯಿಂದ ಓಡಾಡುತ್ತಿದ್ದುದು ಕಂಡು ಬಂತು.

ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಾಮಾನ್ಯ ವಿಷಯ ಆದರೆ, ಸೇವೆಯಲ್ಲಿದ್ದಾಗ ಮಾಡಿದ ಕಾರ್ಯ ಸ್ಮರಣೀಯವಾಗಿ ಉಳಿದರೆ ಸಿಗುವ ಗೌರವ ಎಂತದ್ದು ಎಂಬುದಕ್ಕೆ ಕಾಲೇಜಿನ ಪ್ರಾಂಶುಪಾಲರಾಗಿದ್ದು, ಗುರುವಾರ ನಿವೃತ್ತರಾದ ಬಾಲಕೃಷ್ಣ ಅವರಿಗೆ ವಿದ್ಯಾರ್ಥಿಗಳು,ಉಪನ್ಯಾಸಕರು ನೀಡಿದ ಬೀಳ್ಕೊಡುಗೆ ಸಾಕ್ಷಿಯಾಗಿ ಹೃದಯಸ್ಪರ್ಶಿಯಾಗಿತ್ತು.

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಯು ಪ್ರಭಾರ ಡಿಡಿ ಮಂಜುಳಾ ಮತ್ತಿತರರು ಮಾತನಾಡಿ, ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು,ನಿವೃತ್ತ ಪ್ರಾಂಶುಪಾಲರು ಮಾತನಾಡಿ, ‘ಕಾಯಕಯೋಗಿ’ಯಾಗಿ ಬಾಲಕೃಷ್ಣ ಅವರು ನೀಡಿದ ಸೇವೆ ಸ್ಮರಣೀಯವಾಗಿದೆ,ಬಾಲಕಿಯರ ಪಿಯು ಕಾಲೇಜಿನಲ್ಲಿ ಮಕ್ಕಳಿಗೆ ಉತ್ತಮ ಶೌಚಾಲಯ ವ್ಯವಸ್ಥೆಯೂ ಇರಲಿಲ್ಲ, ಎಲ್ಲೆಂದರಲ್ಲಿ ಕಸ ತುಂಬಿತ್ತು, ಶೌಚಾಲಯದ ಸಮಸ್ಯೆ ವಿಧಾನಸಭೆ,ಪರಿಷತ್ ಸದನಗಳಲ್ಲೂ ಪ್ರತಿಧ್ವನಿಸಿತ್ತು ಎಂದು ಸ್ಮರಿಸಿದರು.

ಅಂತಹ ಸಂಸ್ಥೆಗೆ ಪ್ರಾಂಶುಪಾಲರಾಗಿ ಬಂದ ಬಾಲಕೃಷ್ಣ ಅವರು, ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವಂತೆ ಆಕರ್ಷಣೀಯಗೊಳಿಸಿದರು. ಸುಸಜ್ಜಿತ ಶೌಚಾಲಯ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಇಡೀ ಕಾಲೇಜಿನ ಆವರಣದಲ್ಲಿ ಸಿಮೆಂಟ್ ಟೈಲ್ಸ್ನ ನೆಲಹಾಸು, ಇಡೀ ಆವರಣ ಹಸಿರಿನಿಂದ ಕಂಗೊಳಿಸಲು ಅಗತ್ಯವಾದ ಗಿಡಮರಗಳನ್ನು ನೆಟ್ಟು ನೀರುಣಿಸಿ ಉಪನ್ಯಾಸಕರ ಸಹಕಾರ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ ಮಾತನಾಡಿ, ಕಾಲೇಜಿನ ಆವರಣದಲ್ಲಿ ಭೂತಬಂಗಲೆಯಂತಿದ್ದ ಹಳೆಯ ಬ್ರಿಟೀಷರ ಕಾಲದ ಕಟ್ಟಡವನ್ನು ನವೀಕರಿಸಿ, ಅದನ್ನೇ ಕಚೇರಿಯಾಗಿಸಿಕೊಂಡದ್ದು ಶ್ಲಾಘನೀಯ ಕೆಲಸ ಎಂದು ಸ್ಮರಿಸಿದರು.

ದಾನಿಗಳ ನೆರವನ್ನು ಕಾಲೇಜಿನ ಅಭಿವೃದ್ದಿಗೆ ಹರಿಸುವಲ್ಲಿ ಅವರು ಪಟ್ಟ ಶ್ರಮ ಇತರರಿಗೆ ಆದರ್ಶವಾಗಿದೆ ಎಂದು ತಿಳಿಸಿದ ಅವರು, ಮಲಬಾರ್ ಗೋಲ್ಡ್ ಮತ್ತಿರರ ಸಂಸ್ಥೆಗಳಿಂದ ಕಾಲೇಜಿನ ಬಡ ಹೆಣ್ಣು ಮಕ್ಕಳಿಗೆ ಲಕ್ಷಾಂತರ ರೂ ವಿದ್ಯಾರ್ಥಿ ವೇತನ ಹರಿದು ಬರುವಂತೆ ಮಾಡುವಲ್ಲಿಯೂ ಬಾಲಕೃಷ್ಣ ಅವರ ಸೇವೆ ಇದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಬಾಲಕೃಷ್ಣ, ವೇಮಗಲ್,ಬಂಗಾರಪೇಟೆ, ಮಾಲೂರು,ಬಾಗೇಪಲ್ಲಿ,ಕೋಲಾರಗಳಲ್ಲಿ ಮಾಡಿದ ೩೧ ವರ್ಷ ಸೇವೆ ಸಂತೃಪ್ತಿ ತಂದಿದೆ, ಕೋಲಾರದಲ್ಲಿ ಪ್ರಾಂಶುಪಾಲನಾಗಿ ೫ ವವರ್ಷ ಕೆಲಸ ಮಾಡಿದ್ದು, ನನ್ನ ಶಕ್ತಿ ಮೀರಿ ಕಾಲೇಜು ಅಭಿವೃದ್ದಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.

ನನ್ನೀ ಸಾಧನೆಯ ಹಿಂದೆ ಕಾಲೇಜಿನ ಎಲ್ಲಾ ಉಪನ್ಯಾಸಕರ ನೆರವು ಇದೆ, ನನ್ನೀ ಹಗಲಿರುಳು ಮಾಡಿದ ಕಾಯಕದಿಂದಾಗಿ ಕಾಲೇಜು ಇಷ್ಟೊಂದು ಆಕರ್ಷಣೀಯವಾಗಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ನುಡಿದರು.

ಕಾರ್ಯಕ್ರಮದಲ್ಲಿ ಮುಖಂಡ ಕಲ್ಲುಪಲ್ಲಿ ಪ್ರಕಾಶ್, ವಿವಿಧ ಕಾಲೇಜುಗಳ ಹಾಲಿ ಹಾಗೂ ನಿವೃತ್ತ ಪ್ರಾಂಶುಪಾಲರುಗಳಾದ ಜಯರಾಂ, ನಾರಾಯಣಪ್ಪ,ಪಾಟೀಲ್,ಲಕ್ಷ್ಮಣರೆಡ್ಡಿ, ಪರುಷುರಾಮ ಉನ್ಕಿ, ಮಂಜುಳಾ,ಚಂದ್ರಪ್ಪ, ರಾಜು, ಸರೋಜಮ್ಮ, ಕಾಲೇಜಿನ ಉಪನ್ಯಾಸಕರಾದ ಉದಯಕುಮಾರ್, ಅಶ್ವಥ್ಥಗೌಡ,ದಿನಕರ್, ವೀನಾ, ಸುಜಾತಾ, ಸಂತೋಷ್, ಖಾದರ್, ರಮೇಶ್, ರಾಮಪ್ಪ ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ಉಪನ್ಯಾಸಕರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಬಾಲಕೃಷ್ಣ ದಂಪತಿಗಳನ್ನು ಬೀಳ್ಕೊಟ್ಟರು.

ಚಿತ್ರ : ಕೋಲಾರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಿವೃತ್ತರಾದ ಬಾಲಕೃಷ್ಣ ಅವರನ್ನು ಸ್ನೇಹಿತರು, ವಿದ್ಯಾರ್ಥಿಗಳು,ಉಪನ್ಯಾಸಕರು ಬೀಳ್ಕೊಟ್ಟರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande