ಗಾಡ್ಗೀಳರ ಕೃತಿಯಲ್ಲಿ ಅರಣ್ಯ ಪರಿಸರದ ನಂಟು
ಗಾಡ್ಗೀಳರ ಕೃತಿಯಲ್ಲಿ ಅರಣ್ಯ ಪರಿಸರದ ನಂಟು
ಚಿತ್ರ: ಕೋಲಾರದ ಓದುಗ ಕೇಳುಗ ತಿಂಗಳ ಕಾರ್ಯಕ್ರಮದಲ್ಲಿ ಲೇಖಕಿ ಶಾರದಾ ಗೋಪಾಲ್ ಮಾತನಾಡಿದರು.


ಕೋಲಾರ, ೨೮, ಜುಲೈ (ಹಿ.ಸ) :

ಆ್ಯಂಕರ್ : ಅರಣ್ಯಗಳ ಅಭಿವೃದ್ಧಿಯಲ್ಲಿ ಜನಸಮುದಾಯದ ಪಾಲ್ಗೊಳ್ಳುವಿಕೆ ಕುರಿತಂತೆ ಅರಣ್ಯ ಇಲಾಖೆ ಹೊಂದಿರುವ ಧೋರಣೆಯೇ ಅರಣ್ಯಗಳ ನಾಶಕ್ಕೆ ಕಾರಣವಾಗಿದೆ ಎಂದು ಧಾರವಾಡದ ಲೇಖಕಿ, ಅನುವಾದಕಿ ಹಾಗು ಸಾಮಾಜಿಕ ಕಾರ್ಯಕರ್ತೆ ಶಾರದಾ ಗೋಪಾಲ ಅವರು ಅಭಿಪ್ರಾಯಪಟ್ಟರು.

ಕೋಲಾರದ ಓದುಗ-ಕೇಳುಗ ನಮ್ಮನಡೆ ಯ ೫೧ನೇ ತಿಂಗಳ ಕಾರ್ಯಕ್ರಮದಲ್ಲಿ ಪ್ರೊ ಮಾಧವ ಗಾಡ್ಗೀಳರ ಆತ್ಮಚರಿತ್ರೆ (ಅನುವಾದಿತ ಕೃತಿ) ಏರುಘಟ್ಟದ ನಡಿಗೆ ಕುರಿತು ಅವರು ಮಾತನಾಡಿದರು.

ಗಾಡ್ಗೀಳರ ಆತ್ಮಚರಿತ್ರೆಯಲ್ಲಿ ಅವರ ತಮ್ಮ ಹಾಗು ಕುಟುಂಬದ ಬಗ್ಗೆ ನೀಡಿರುವ ವಿವರಗಳು ತೀರಾ ಕಡಿಮೆ. ಆದರೆ ಭಾರತದಾದ್ಯಂತ ಕಾಡು ಮತ್ತು ಪರಿಸರವನ್ನು ನಂಬಿ ಬದುಕುವ ತಳ ಮಟ್ಟದ ಜನಾಂಗಗಳು ಮತ್ತು ಅರಣ್ಯ ಪರಿಸರದೊಂದಿಗೆ ಅವರ ಗಾಢ ಸಂಬಂಧಗಳ ಅಧ್ಯಯವೇ ಇಡೀ ಕೃತಿಯಲ್ಲಿ ಆವರಿಸಿಕೊಂಡಿದೆ ಎಂದರು.

ಗಾಡ್ಗೀಳರ ಅಧ್ಯಯನದ ವರದಿಗಳು ಅಭಿವೃದ್ಧಿಯ ಹೆಸರಿನಲ್ಲಿ ಆಡಳಿತಗಳು ಸಂಪನ್ಮೂಲಗಳ ನಾಶ ಮಾಡುತ್ತ ಗುತ್ತಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ದಿಕ್ಕಿನಲ್ಲಿವೆ ಎಂಬುದನ್ನೇ ಪ್ರತಿ ಪಾದಿಸಿವೆ. ಹೀಗಾಗಿ ಅವರ ವರದಿಗಳನ್ನು ರಾಜಕೀಯ ಪಕ್ಷಗಳು ಅಲಕ್ಷಿಸಿವೆ. ಇಂದು ಅವರ ವರದಿಗಳ ಅಧ್ಯಯನದ ಮೂಲಕ, ಕಾಡಿನ ಸಾವಯವ ಸಂಬಂಧಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಕ, ಲೇಖಕ ಹಾಗು ವನ್ಯಜೀವಿ ಛಾಯಾಗ್ರಾಹಕ ಎಂ. ಜೆ. ರಾಜೀವ ಮೇಲೂರು ಗಾಡ್ಗೀಳರೊಂದಿಗೆ ಅವರ ಒಡನಾಟವನ್ನು ಸ್ಮರಿಸಿಕೊಂಡರು, ಹಾಗು ಇಂದು ಕನ್ನಡದಲ್ಲಿ ಪರಿಸರ ಎಂಬ ಪದಕ್ಕೆ ವಿರುದ್ಧ ಪದವಾಗಿ ಪ್ರಗತಿ ಎಂಬ ಪದವನ್ನು ಪ್ರಯೋಗಿಸುವುದು ಸೂಕ್ತ ಎಂದರು. ಇಂದು ಶಿಕ್ಷಣದಲ್ಲಿ ಪರಿಸರ ಕುರಿತ ವಿಚಾರಗಳು ಪ್ರಾಥಮಿಕ ಹಂತದಿಂದಲೇ ಪಠ್ಯದ ಭಾಗವಾಗಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ನಿರೂಪಕಿ ಮಂಜುಳಾ ಕೊಂಡರಾಜನಹಳ್ಳಿ ಅವರು ಗೀತೆಯೊಂದನ್ನು ಹಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಧಾರವಾಡದ ಲೇಖಕ, ಸಾಮಾಜಿಕ ಹೋರಾಟಗಾರ ಡಾ. ಗೋಪಾಲ ದಾಬಡೆ, ಬೆಂಗಳೂರಿನ ಭೂಮಿ ಬುಕ್ಸ್ ನ ಪ್ರಕಾಶಕಿ ಶ್ರೀಮತಿ ವಿಶಾಲಾಕ್ಷಿ ಹಾಜರಿದ್ದರು.

ಲೇಖಕ, ಪಕ್ಷಿತಜ್ಞ ನವೀನ್ ಕಲ್ಲುಂಡಿ, ಲೇಖಕ ಎಚ್. ಎ. ಪುರುಷೋತ್ತಮರಾವ್, ಸಾಹಿತ್ಯಾಸಕ್ತ ನೀಲಕಂಠೇಗೌಡ ಅವರು ಚರ್ಚೆಯಲ್ಲಿ ಪಾಲ್ಗೊಂಡರು. ಇಂದಿನ ಕಾರ್ಯಕ್ರಮ ಊಟದ ವ್ಯವಸ್ಥೆಯ ವೆಚ್ಚವನ್ನು ಭರಿಸಿದ್ದ ಪತ್ರಕರ್ತ, ಲೇಖಕ ವಿಶ್ವ ಕುಂದಾಪುರ ಹಾಜರಿದ್ದರು.

ಚಿತ್ರ : ಕೋಲಾರದ ಓದುಗ ಕೇಳುಗ ತಿಂಗಳ ಕಾರ್ಯಕ್ರಮದಲ್ಲಿ ಲೇಖಕಿ ಶಾರದಾ ಗೋಪಾಲ್ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande