ದಾವಣಗೆರೆ, 27 ಜುಲೈ (ಹಿ.ಸ.) :
ಆ್ಯಂಕರ್ : ಧಾರಾಕಾರ ಮಳೆಯಿಂದಾಗಿ ದಾವಣಗೆರೆ ಜಿಲ್ಲೆ ಸೇರಿದಂತೆ ಚಿಕ್ಕಮಗಳೂರು, ಶಿವಮೊಗ್ಗ ಭಾಗಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಈ ಪರಿಣಾಮವಾಗಿ ಹರಿಹರ ತಾಲೂಕಿನ ಪ್ರಸಿದ್ಧ ಪವಿತ್ರ ಕ್ಷೇತ್ರ ಉಕ್ಕಡಗಾತ್ರಿ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ತುಂಗಭದ್ರಾ ನದಿ ಭೋರ್ಗರೆಯುತ್ತಿದ್ದು, ನದಿಗೆ ತುಂಗಾ ಹಾಗೂ ಭದ್ರಾ ಅಣೆಕಟ್ಟೆಗಳಿಂದ ಅಪಾರ ಪ್ರಮಾಣದ ನೀರನ್ನು ಬಿಡಲಾಗಿದೆ.
ನದಿಯ ನೀರಿನ ಮಟ್ಟ ದಿನೇ ದಿನೇ ಹೆಚ್ಚುತ್ತಿರುವುದರಿಂದ ಉಕ್ಕಡಗಾತ್ರಿ ದೇವಾಲಯಕ್ಕೆ ಜಲದಿಗ್ಬಂಧನ ಉಂಟಾಗಿದೆ. ಸ್ಥಳೀಯ ಆಡಳಿತ ಭಕ್ತರಿಗೆ ದೇವಾಲಯದ ಸುತ್ತಮುತ್ತ ತಾತ್ಕಾಲಿಕ ಪ್ರವೇಶ ನಿರ್ಬಂಧವನ್ನು ಹೇರಿದೆ. ಈ ಪ್ರದೇಶದ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟ, ಜವಳಘಟ್ಟ ಸಮೀಪದ ಅಂಗಡಿಗಳು ನೀರಿನಲ್ಲಿ ಮುಳುಗಿದ್ದು, ಅಪಾರ ಆಸ್ತಿ ನಷ್ಟ ಸಂಭವಿಸಿದೆ.
ಮಳೆಯಿಂದಾಗಿ ನಂದಿಗುಡಿ ಮಾರ್ಗವಾಗಿ ಉಕ್ಕಡಗಾತ್ರಿಗೆ ಹೋಗುವ ಮುಖ್ಯ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಫತ್ತೇಪುರ್ ಕಡೆಯಿಂದ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ರಸ್ತೆಗಳೂ ಜಲಾವೃತವಾಗಿವೆ. ಪರಿಣಾಮವಾಗಿ ಭಕ್ತರು ಹಾಗೂ ಸ್ಥಳೀಯರು ಉಕ್ಕಡಗಾತ್ರಿಗೆ ತಲುಪಲು ಬದಲಿ ಮಾರ್ಗಗಳಿಂದ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಭಕ್ತರಿಗೆ ನೀರಿಗೆ ಇಳಿಯದಂತೆ ದೇವಾಲಯದ ಆಡಳಿತ ಮಂಡಳಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಭಕ್ತರ ಸುರಕ್ಷತೆಗಾಗಿ ಸೂಚನಾ ಫಲಕಗಳು, ಬ್ಯಾರಿಕೇಡ್‌ಗಳು ಅಳವಡಿಸಲಾಗಿದೆ.
ತಾಲೂಕು ಆಡಳಿತ ಮುಂಜಾಗೃತಾ ಕ್ರಮವಾಗಿ ನದಿ ಪಾತ್ರದ ಜನತೆಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ವಿನಂತಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa