ಬೆಂಗಳೂರು, 25 ಜುಲೈ (ಹಿ.ಸ.) :
ಆ್ಯಂಕರ್ : ಭಾರತ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆಯಡಿಯಲ್ಲಿ ಕರ್ನಾಟಕದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಲ್ಕು ಸಾಕಾನೆಗಳನ್ನು ಜಪಾನ್‌ಗೆ ರವಾನೆ ಮಾಡಲಾಗಿದೆ. ಬೃಹತ್ ಸರಕು ಸಾಗಣೆ ವಿಮಾನದ ಮೂಲಕ ಕಳುಹಿಸಲಾಗಿರುವ ಈ ಸಾಕಾನೆಗಳ ಪಯಣ ದೇಶದ ಪ್ರಾಣಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಈ ನಾಲ್ಕು ಆನೆಗಳನ್ನು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾತಾರ್ ಏರ್ ವೇಸ್‌ನ B777-200F ಸರಕು ಸಾಗಣೆ ವಿಮಾನದಲ್ಲಿ ಜಪಾನ್‌ನ ಒಸಾಕಾ-ಕಾನ್ಲೈ ವಿಮಾನ ನಿಲ್ದಾಣಕ್ಕೆ ರವಾನೆ ಮಾಡಲಾಗಿದೆ. ಸುಮಾರು 8 ಗಂಟೆಗಳ ವಿಮಾನ ಪ್ರಯಾಣದ ಹಿನ್ನೆಲೆಯಲ್ಲಿ ಆನೆಗಳಿಗೆ ಕಳೆದ ಮೂರು ತಿಂಗಳಿನಿಂದ ವಿಶೇಷ ತರಬೇತಿ ನೀಡಲಾಗಿತ್ತು. ಜೊತೆಗೆ ಜಪಾನ್‌ನಿಂದ ಬಂದಿದ್ದ ಮಾವುತರೂ ಸಹ ತರಬೇತಿ ಪಡೆದಿದ್ದರು.
ಈ ಕಾರ್ಯಾಚರಣೆಯಲ್ಲಿ ಬನ್ನೇರುಘಟ್ಟ ಉದ್ಯಾನವನದ ಇಬ್ಬರು ವೈದ್ಯರು, ನಾಲ್ವರು ಮಾವುತರು, ಓರ್ವ ಮೇಲ್ವಿಚಾರಕ ಹಾಗೂ ಜೀವಶಾಸ್ತ್ರಜ್ಞೆ 15 ದಿನಗಳ ಕಾಲ ಜಪಾನ್‌ಗೆ ತೆರಳಿದ್ದು ಆನೆಗಳು ವಾತಾವರಣಕ್ಕೆ ಹೊಂದಿಕೊಳ್ಳುವಲ್ಲಿ ನೆರವಾಗಲಿದ್ದಾರೆ.
ಈ ವಿನಿಮಯದ ಭಾಗವಾಗಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಶೀಘ್ರದಲ್ಲಿ ಅಪರೂಪದ ಪ್ರಾಣಿಗಳಾದ ಚೀತಾ, ಜಾಗ್ವಾರ್, ಪೂಮಾ, ಚಿಂಪಾಂಜಿ ಹಾಗೂ ಕ್ಯಾಪುಚಿನ್ ಕೋತಿಗಳು ಬರುವ ಸಾಧ್ಯತೆ ಇದೆ. ಇದರಿಂದ ಉದ್ಯಾನವನದ ಆಕರ್ಷಣೆ ಮತ್ತಷ್ಟು ಹೆಚ್ಚಳವಾಗಲಿದ್ದು, ಪ್ರಾಣಿ ಪ್ರಿಯರಿಗೆ ವಿಶಿಷ್ಟ ಅನುಭವ ಒದಗಿಸಲಿರುವುದು ಖಚಿತ.
ಈ ಪ್ರಕ್ರಿಯೆಗೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರ, ಭಾರತ ಹಾಗೂ ಜಪಾನ್‌ನ ರಾಯಭಾರ ಕಚೇರಿಗಳು, ಹಾಗೂ ಅಧಿಕಾರಿಗಳು ಶ್ರಮ ವಹಿಸಿದ್ದು. ಈ ದಿಟ್ಟ ಹೆಜ್ಜೆಯು ಭಾರತೀಯ ವನ್ಯಜೀವಿ ಸಂರಕ್ಷಣೆಯಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.
ಈ ಪ್ರಕ್ರಿಯೆ 2023ರಿಂದಲೇ ಪ್ರಾರಂಭಗೊಂಡಿದ್ದ ಪ್ರಯತ್ನವಾಗಿದೆ. ಕೊನೆಗೂ ಯಶಸ್ವಿಯಾಗಿ ದೇಶದ ಮೊದಲ ಆನೆ ವಿಮಾನ ಯಾನವಾಗಿ ದಾಖಲಾಗಿದ್ದು, ಜೈವಿಕ ವಿನಿಮಯ ಕ್ಷೇತ್ರದಲ್ಲಿ ಭಾರತ–ಜಪಾನ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa