ಕೋಲಾರಮ್ಮನಿಗೆ ಜಿಲ್ಲಾಡಳಿತದ ಜನ್ಮದಿನದ ಪ್ರೀತಿಯ ಕಾಣಿಕೆ : ರಥಬೀದಿಗೆ ಹೊಸ ರೂಪ!
ಕೋಲಾರಮ್ಮನಿಗೆ ಜಿಲ್ಲಾಡಳಿತದ ಜನ್ಮದಿನದ ಪ್ರೀತಿಯ ಕಾಣಿಕೆ : ರಥಬೀದಿಗೆ ಹೊಸ ರೂಪ!
ಕೋಲಾರಮ್ಮ ದೇವಾಲಯಕ್ಕೆ ಹೋಗುವ ರಥ ಬೀದಿಗೆ ಪ್ರವೇಶದ್ವಾರ


ಕೋಲಾರ, ಜುಲೈ ೧೭ (ಹಿ.ಸ) :

ಆ್ಯಂಕರ್ : ಹಲವು ದಶಕಗಳ ಕನಸು ಇಂದು ನನಸಾಗಿದೆ! ಕೋಲಾರದ ನಗರ ದೇವತೆ, ಚೋಳರ ಕಾಲದ ಇತಿಹಾಸ ಹೊಂದಿರುವ ಶ್ರೀ ಕೋಲಾರಮ್ಮ ದೇವಿಯ ದೇವಾಲಯದ ಎದುರಿನ ರಥ ಬೀದಿಗೆ ಹೊಸ ಕಾಯಕಲ್ಪ ದೊರೆತಿದೆ. ಇಷ್ಟು ವರ್ಷಗಳ ಕಾಲ ಅವ್ಯವಸ್ಥೆ ಗಳ ಆಗರಗಳಿಂದ ತುಂಬಿ, ಕಡೆಗಣನೆಗೊಳಗಾದ ರಥಬೀದಿ, ಈಗ ರಾಜಬೀದಿಯಂತೆ ಕಂಗೊಳಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರ ಅಚಲ ಇಚ್ಛಾಶಕ್ತಿ ಮತ್ತು ವೈಯಕ್ತಿಕ ಆಸಕ್ತಿ.

ಕೇವಲ ಆರು ತಿಂಗಳ ಹಿಂದೆ ಕೋಲಾರಕ್ಕೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಡಾ. ಎಂ.ಆರ್. ರವಿ ಅವರು, ಅಧಿಕಾರ ಸ್ವೀಕರಿಸಿದ ಕೂಡಲೇ ಕೋಲಾರಮ್ಮನ ದರ್ಶನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ರಥಬೀದಿಯ ದುಸ್ಥಿತಿಯನ್ನು ಗಮನಿಸಿ, ತಕ್ಷಣವೇ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಕರ್ತರ ಸಂವಾದ ಸಭೆಯಲ್ಲಿ ಈ ಕುರಿತು ಭರವಸೆ ಪ್ರಕಟಿಸಿದ್ದರು. ಅಂದಿನಿ0ದ ಈ ಕನಸು ನನಸಾಗುವತ್ತ ಸಾಗಿತು.

ಸುಮಾರು ೯೪ ಲಕ್ಷ ರೂಪಾಯಿ ವೆಚ್ಚದಲ್ಲಿ, ಮುಜರಾಯಿ ಇಲಾಖೆಯ ಮೇಲುಸ್ತುವಾರಿ ಮತ್ತು ನಗರಸಭೆಯ ಸಹಯೋಗದಲ್ಲಿ ರಥಬೀದಿಯ ಆಧುನೀಕರಣ ಕಾರ್ಯ ಪೂರ್ಣಗೊಂಡಿದೆ. ದಶಕಗಳಿಂದ ಕಡೆಗಣಿಸಲ್ಪಟ್ಟಿದ್ದ ರಥಬೀದಿ ಈಗ ಕೋಲಾರಮ್ಮನ ಜಯಂತಿ ಉತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಕಳೆದ ಎಂಟು-ಹತ್ತು ವರ್ಷಗಳಿಂದ, ಕೋಲಾರಮ್ಮನ ರಥೋತ್ಸವ ಚಿಕ್ಕದಾದ ರಸ್ತೆಯಲ್ಲೇ ಸಾಹಸಮಯವಾಗಿ ಸಾಗುತ್ತಿತ್ತು. ರಥೋತ್ಸವ ಸುಗಮವಾಗಿ ನಡೆಯಲು ರಸ್ತೆಯನ್ನು ಸಿದ್ಧಪಡಿಸುವಂತೆ ಭಕ್ತರು ಮತ್ತು ದೇವಾಲಯದವರು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಯಾರೂ ಕಿವಿಗೊಟ್ಟಿರಲಿಲ್ಲ. ಈಗ ನ್ಯಾಯಾಲಯ ವೃತ್ತದಿಂದ ಸೋಮೇಶ್ವರ ಸ್ವಾಮಿ ದೇವಸ್ಥಾನದವರೆಗಿನ ರಥಬೀದಿ ಸಂಪೂರ್ಣವಾಗಿ ಸುಗಮವಾಗಿದೆ. ಈಬಾರಿ ಅಮ್ಮನವರ ರಥೋತ್ಸವ ವಿಜೃಂಭಣೆಯಿAದ ಈ ಹೊಸ ರಥಬೀದಿಯಲ್ಲಿ ನಡೆಯಲಿದೆ.

ರಥಬೀದಿಯ ಆಧುನೀಕರಣ ಕೇವಲ ರಸ್ತೆ ಸುಧಾರಣೆಗೆ ಸೀಮಿತವಾಗಿಲ್ಲ. ವಿಶಾಲವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದ್ದು, ಭಕ್ತರು ರಥವನ್ನು ಸುಲಭವಾಗಿ ದರ್ಶಿಸಬಹುದು. ನ್ಯಾಯಾಲಯ ವೃತ್ತದಲ್ಲಿ ಕೋಲಾರಮ್ಮ ದೇವಾಲಯದ ಭವ್ಯ ಪ್ರವೇಶದ್ವಾರ, ಅಂದರೆ ಸ್ವಾಗತ ಕಮಾನು ನಿರ್ಮಾಣಗೊಂಡಿದೆ. ದೇವಾಲಯದ ಆವರಣದಲ್ಲಿ ಭಕ್ತರ ಧ್ಯಾನ ಮತ್ತು ಪ್ರಾರ್ಥನೆಗೆ ಅನುಕೂಲವಾಗುವಂತೆ ೧೦ ಕಲ್ಲಿನ ಬೆಂಚುಗಳನ್ನು ಅಳವಡಿಸಲಾಗಿದೆ.

ಭಕ್ತರ ವಾಹನ ನಿಲುಗಡೆಗೆ ಅನುಕೂಲವಾಗುವಂತೆ ದೇವಾಲಯದ ಎದುರಿದ್ದ ಅವ್ಯವಸ್ಥಿತ ಅಂಗಡಿಗಳನ್ನು ತೆರವುಗೊಳಿಸಿ ವಿಶಾಲವಾದ ಜಾಗವನ್ನು ಸಿದ್ಧಪಡಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಶೌಚಾಲಯಗಳು ಮತ್ತು ಚಪ್ಪಲಿ ಸ್ಟ್ಯಾಂಡ್‌ಗಳನ್ನು ಸಹ ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಹಲವಾರು ಬಾರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ವೈಯಕ್ತಿಕ ಆಸಕ್ತಿಯನ್ನು ಪ್ರದರ್ಶಿಸಿದ್ದಾರೆ.

ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಕೋಲಾರಮ್ಮನ ಭಕ್ತರಿಗೆ ಮತ್ತು ನಗರದ ಜನರಿಗೆ ಸಂತಸ ತಂದಿದೆ. ಇಂದಿನಿAದ ಕೋಲಾರಮ್ಮನ ರಥೋತ್ಸವ ಹೊಸ ವೈಭವದಿಂದ ನಡೆಯಲಿದೆ.

ಚಿತ್ರ : ಕೋಲಾರಮ್ಮ ದೇವಾಲಯಕ್ಕೆ ಹೋಗುವ ರಥ ಬೀದಿಗೆ ಪ್ರವೇಶದ್ವಾರ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande