ಹುಬ್ಬಳ್ಳಿ, 10 ಜುಲೈ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ಮಂಟೂರ ರಸ್ತೆಯ ಅರಳಿಕಟ್ಟಿ ಓಣಿಯಲ್ಲಿ ಬುಧವಾರ ನಡೆದ ಎರಡು ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು 20 ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾಧರನಗರದ ನಿವಾಸಿ ಸುರೇಶ್ ಸಂಗಣ್ಣವರ ಎಂಬಾತ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆ ಮಾಡಲು ಮಂಟೂರ ರಸ್ತೆಯ ಸ್ಮಶಾನಕ್ಕೆ ನಿವಾಸಿಗಳು ಹೋದ ಸಂದರ್ಭದಲ್ಲಿ ವೈಯಕ್ತಿಕ ದ್ವೇಷ, ವೈಮನಸ್ಸಿನಿಂದ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಅಷ್ಟೇ ಅಲ್ಲದೇ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾಗ ಎರಡು ಗುಂಪಿನವರು ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಗಲಾಟೆಯನ್ನು ಮುಂದುವರೆಸಿದ್ದರು. ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಈ ಬಗ್ಗೆ ಶಹರ್ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ಸೇರಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.
ಆರೋಪಿತರನ್ನು ಗಣೇಶ ಜಾಧವ್ (25), ಸುಭಾಸ್ ಅಲಿಯಾಸ್ ಶುಭಂ ಬಿಜವಾಡ (24), ಪವನ್ ಇಂದರಗಿ (27), ವಿನಾಯಕ ದೋಂಡಿ (22), ಮಂಜುನಾಥ ಅಲಿಯಾಸ್ ಗೌತಮ್ ಗಾಯಕವಾಡ (24), ಅಶ್ವಥ್ ಮಡಿವಾಳರ (30), ರಾಘವೇಂದ್ರ ಭಜಂತ್ರಿ (34), ವಿಶಾಲ ಕರಿಗಾರ (30), ಮಂಜುನಾಥ ಗಾಯಕವಾಡ (34), ರಾಜೇಶ ಕೊರವರ (40), ಶೇಖರ ಯರಕಲ್ (41), ಜಾಕೀರ್ ಹುಸೇನ್ ಶೇಖ್, ನರೋತ್ತಮಸಿಂಗ್ ಬರೋರಿಯಾ (24), ಕುಮಾರ ಬಿಜಾಪೂರ (30), ಮಜೀದ್ ಬೇಪಾರಿ (25), ಮಹ್ಮದ್ ಪಹಾದ್ ಮೀಠಾಯಿಗರ (20), ಇಸಾಕ್ ಬೇಪಾರಿ (26), ಮೆಹಬೂಬ್ ಮುಲ್ಲಾ (20), ಸನ್ನಿ ಅಲಿಯಾಸ್ ಮಚ್ಯಾ(27), ಮುರಾದ ಬೇಪಾರಿ (29) ಇವರಲ್ಲಿ 40 ವಯಸ್ಸಿನ ಇಬ್ಬರನ್ನೂ ಹೊರತುಪಡಿಸಿ ಉಳಿದ 18 ಜನರು 25 ವರ್ಷದ ಆಸುಪಾಸಿನವರಾಗಿದ್ದಾರೆ ಎಂದು ತಿಳಿಸಿದರು.
ಈ ಆರೋಪಿತರ ಪೈಕಿ ಐದು ಜನರು ರೌಡಿಶೀಟರ್ ಇದ್ದು, ಮೂವರು ಎಮ್ ಒಬಿಗಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರೌಡಿಶೀಟರ್ಗಳ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಗಡಿಪಾರು ಮಾಡುವ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಗ್ಯಾಂಗ್ ವಾರ್ ಅಥವಾ ಪೂರ್ವ ನಿಯೋಜಿತ ಎಂದು ಹೇಳಲಾಗುವುದಿಲ್ಲ. ಇದೊಂದು ಗುಂಪು ಘರ್ಷಣೆಯಾಗಿದ್ದು, ವೈಯಕ್ತಿಕ ದ್ವೇಷದ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ. ಇದೀಗ ತನಿಖೆ ಮುಂದುವರೆದಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಓರ್ವ ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ್ದು ಕಂಡುಬಂದಿದೆ. ಆತ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa