ಗದಗ, 06 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಯಲು ಬಸವಣ್ಣ ದೇವರ ದೇವಸ್ಥಾನದ ಬಳಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಎಸೆದಿದ್ದ ಆರೋಪಿಗಳನ್ನು ಲಕ್ಷೇಶ್ವರದ ಪೊಲೀಸರು ಪತ್ತೆ ಹಚ್ಚಿ, ಘಟನೆಯಲ್ಲಿ ಆರೋಪಿಗಳು ಬಳಸಿದ್ದ ಕಾರು ಹಾಗೂ ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಲಕ್ಷ್ಮೀಶ್ವರ ತಾಲೂಕು ನೆಲೂಗಲ್ಲ ಗ್ರಾಮದ ನಿವಾಸಿ ಲಕ್ಷ್ಮೀ ಆನಂದ ಇಂಗಳಗಿ (33) ಕೊಲೆಯಾದ ಮಹಿಳೆ. ಈಕೆ ಗಂಡನೊಡನೆ ಜಗಳ ಮಾಡಿಕೊಂಡು ನೆಲೂಗಲ್ಲನ ತನ್ನ ತವರು ಮನೆಯಲ್ಲಿ ವಾಸಿವಾಗಿದ್ದಳು. ಜೀವನೋಪಾಯಕ್ಕಾಗಿ ಮಂಗಳೂರಿಗೆ ದುಡಿಯಲು ಹೋದಾಗ ಅಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಗೊಟಗೋಡಿ ಗ್ರಾಮದ ಸುನೀಲ್ ಅಶೋಕ ಮಲ್ಲಾರಿ ಅವನೊಂದಿಗೆ ಸ್ನೇಹ ಬೆಳೆಸಿದ್ದಳು. ಮೃತ ಮಹಿಳೆ ಪ್ರಿಯಕರ ಸುನೀಲನಿಗೆ ಹಣ ಕೊಡುವಂತೆ ಪೀಡಿಸುತ್ತಿದ್ದಳು ಎಂದು ತಿಳಿದುಬಂದಿದೆ. ಇದರಿಂದಾಗಿ ರೊಚ್ಚಿಗೆದ್ದಿದ್ದ ಸುನೀಲ ಎ.22ರಂದು ರಾತ್ರಿ ತನ್ನ ಮೂವರು ಸಹಚರರೊಂದಿಗೆ ಕೂಡಿಕೊಂಡು ಕಾರಿನಲ್ಲಿ ಮಹಿಳೆಯನ್ನು ಮಂಗಳೂರಿನತ್ತ ಕರೆದುಕೊಂಡು ಹೋಗುತ್ತಿದ್ದ. ಈ ಸಮಯದಲ್ಲಿ ಹಿಂದಿನಿಂದ ಮಹಿಳೆಯ ಕುತ್ತಿಗೆಗೆ ಹಗ್ಗ ಬಿಗಿದು ಆಕೆಯನ್ನು ಸಾಯಿಸಿ ಸೂರಣಗಿ ಗ್ರಾಮದ ಹತ್ತಿರ ಬಿಸಾಕಿ ಹೋಗಿದ್ದರು.
ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡಾದ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳ ಪತ್ತೆ ಕಾರ್ಯಕ್ಕಿಳಿದ ಪೊಲೀಸರು ಸುನೀಲ್ ಅಶೋಕ ಮಲ್ಲಾರಿ. ಸಿದ್ದಪ್ಪ ನಾಗಪ್ಪ ಕುಬಸದ, ನಟರಾಜ ಈರಪ್ಪ ನಿರಲಗಿ ಹಾಗೂ ರಮೇಶ ಉರ್ಫ್ ಮುತ್ತುರಾಜ ದೇವಪ್ಪ ತಳವಾರ ಎಂಬುವವರನ್ನು ಬಂಧಿಸಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಲಕ್ಷೇಶ್ವರ ಪೊಲೀಸರನ್ನು ಅಭಿನಂದಿಸಿ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಎಸ್‌ಪಿ ಬಿ.ಎಸ್. ನೇಮಗೌಡ ತಿಳಿಸಿದರು.
ಸದರಿ ಪ್ರಕರಣವನ್ನು ಬೇಧಿಸುವಲ್ಲಿ ಲಕ್ಷೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು. ಪ್ರಕರಣ ಬೇಧಿಸುವಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡಾದ, ಕ್ರೈಮ್ ಪಿಎಸ್‌ಐ ಟಿ.ಕೆ. ರಾಠೋಡ, ಸಿಬ್ಬಂದಿಗಳಾದ ಮಹಾವೀರ ಸದರಣ್ಣವರ, ಯರಗಟ್ಟಿ ಎನ್.ಎ. ಮೌಲ್ವಿ, ಎಮ್.ಎ. ಶೇಖ, ಡಿ.ಎಸ್. ನದಾಪ್, ಪಾಂಡುರಂಗರಾವ್, ಹೆಚ್.ಐ. ಕಲ್ಲಣ್ಣವರ, ಮಧುಚಂದ್ರ ಧಾರವಾಡ, ಸೋಮು ವಾಲ್ಮೀಕಿ, ನಂದಯ್ಯ ಮಠಪತ ರಾಮು ಮಾಳೊತ್ತರ, ಲೋಹಿತ ಹಮ್ಮಗಿ, ಕೃಷ್ಣಾ ಹುಲಗೂರ, ಅಪ್ಪಣ್ಣ ರಾಠೋಡ, ಗುರು ಬೂದಿಹಾಳ, ಸಂಜು ಕೊರಡೂರ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP