ಬಳ್ಳಾರಿ, 18 ಮೇ (ಹಿ.ಸ.) :
ಆ್ಯಂಕರ್ : ನಮ್ಮ ಸಮಾಜದಲ್ಲಿ ಮಂಗಳಮುಖಿಯರನ್ನು ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತಿದ್ದು, ಅವರಿಗೆ ಉಡಿತುಂಬುವ ಮೂಲಕ ಗೌರವಿಸುತ್ತಿರುವುದು ಸದ್ಧರ್ಮ ಶಿರೋಮಣಿ ನಂಜುಂಡೇಶ್ವರ ತಾತನವರ ಸಮಸಮಾಜ ನಿರ್ಮಾಣದ ಉದಾತ್ತವಾದ ಧ್ಯೇಯವಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಅಭಿನವ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಶ್ಲಾಘಿಸಿದ್ದಾರೆ.
ಬಳ್ಳಾರಿ ತಾಲೂಕಿನ ಮೋಕ ಹೋಬಳಿಯ ದಾಸರ ನಾಗನಹಳ್ಳಿಯ ಶ್ರೀಮದ್ ಉಜ್ಜಯಿನಿ ಖಾಸ ಶಾಖ ಮಠ ಶ್ರೀ ಗುರು ಮರುಳ ಸಿದ್ಧಾಶ್ರಮ ಮಠ ಹಾಗೂ ಶ್ರೀ ನಂಜುಂಡೇಶ್ವರ ಜನಸೇವಾ ಕಲ್ಯಾಣ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಂಡಿರುವ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು, ತಿಪ್ಪೇಸ್ವಾಮಿ ತಾತನವರ ಏಳನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಸಾಮೂಹಿಕ ವಿವಾಹದಲ್ಲಿ ಭಾನುವಾರ ನಡೆದ ಶ್ರೀಮದ್ ಕಾಶಿ ಜಗದ್ಗುರುಗಳವರ ಮತ್ತು ಶ್ರೀಮದ್ ಉಜ್ಜಯಿನಿ ಜಗದ್ಗುರುಗಳಅಡ್ಡಪಲ್ಲಕ್ಕಿ ಉತ್ಸವದ ನಂತರ ಮಾತನಾಡಿದರು.
ಮಂಗಳಮುಖಿಯರಿಗೆ ಸಮಾಜದಲ್ಲಿ ಯಾವುದೇ ಸ್ಥಾನಮಾನಗಳಿಲ್ಲ. ಇತ್ತೀಚೆಗೆ ಅವರು ಸರ್ಕಾರಿ ನೌಕರಿ, ಪ್ರತಿಭಾ ಪ್ರದರ್ಶನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೂ, ಸಮಾಜದಲ್ಲಿ ಅವರು ತಿರಸ್ಕಾರಕ್ಕೆ ಒಳಗಾಗುತ್ತಿರುವುದು ವಿಷಾಧನೀಯ. ಅಂಥವರನ್ನು ಈ ಸಮಾರಂಭದಲ್ಲಿ ಗೌರವಿಸಿರುವುದು ನಮಗೂ ಸಂತೋಷ ತಂದಿದೆ ಎಂದರು.
ನಂಜುಂಡೇಶ್ವರ ಮಠಗಳಲ್ಲಿ ಭಕ್ತರು ಜಾತಿಭೇದ, ಜನಾಂಗ - ಧರ್ಮ ಬೇಧ ಆಚರಿಸುತ್ತಿಲ್ಲ. ಭಕ್ತ ಕೇವಲ ಭಕ್ತನಾಗಿ ಇಲ್ಲಿ ಸೇವೆ ಸಲ್ಲಿಸುತ್ತಿರುವುದು ವಿಶೇಷ. ಈ ಮಠವು ಸಮ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಜಂಗಮರ ಹೊಸಳ್ಳಿ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ತುಮಕೂರಿನ ರಂಭಾಪುರಿ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಹೆಬ್ಬಾಳ ಬೋಳೋಡಿ ಬಸವೇಶ್ವರ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರಗಡ್ಡೆ ಗ್ರಾಮದ ಕೊಟ್ಟೂರು ಶಾಖ ಮಠದ ಮರಿ ಕೊಟ್ಟೂರು ದೇಶೀಕರು, ಕ್ಯಾದಿಗೆಹಾಳು ಗಂಗಾಧರ ತಾತನವರು, ಬೆಣಕಲ್ಲಿನ ನಾಗಲಿಂಗಯ್ಯ ತಾತನವರು ವೇದಿಕೆಯಲ್ಲಿದ್ದರು.
ಉಜ್ಜಯಿನಿ ಕಾಸಮಠ ಗುರು ಮರುಳ ಸಿದ್ಧಾಶ್ರಮ ನಾಗೇನಹಳ್ಳಿ ಮಠದ ಮರಿ ಸ್ವಾಮಿಗಳಾದ ಚಾಮರಾಜಸ್ವಾಮಿ ಶರಣಬಸವ ತಾತನವರು, ರವಿ ಸ್ವಾಮಿಗಳು, ಕುಮಾರಸ್ವಾಮಿಗಳು ಮಠದಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್