ಬೆಂಗಳೂರು, 18 ಮೇ (ಹಿ.ಸ.) :
ಆ್ಯಂಕರ್ : ಮೇ 21ರಂದು ಕರ್ನಾಟಕವು ಆಂಧ್ರಪ್ರದೇಶಕ್ಕೆ ಆರು ತರಬೇತಿ ಪಡೆದ ಆನೆಗಳನ್ನು ಉಡುಗೊರೆಯಾಗಿ ಕಳುಹಿಸಲು ಸಜ್ಜಾಗಿದೆ. ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಿಂದ ರಂಜನ್, ದೇವ, ಮಾಸ್ತಿ, ಕರುನಾಡು ಮತ್ತು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಶಿಬಿರದಿಂದ ಕೃಷ್ಣ ಹಾಗೂ ಅಭಿಮನ್ಯು ಎಂಬ ಆನೆಗಳನ್ನು ಚಿತ್ತೂರಿಗೆ ಕಳುಹಿಸಲು ನಿರ್ಧರಿಸಿದೆ.
ಆಂಧ್ರ ಪ್ರದೇಶದಲ್ಲಿ ದಿನೇ ದಿನಕ್ಕೆ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷವನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಕರ್ನಾಟಕದಲ್ಲಿಯೇ ಹಾಸನ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ನಡೆಯುತ್ತಿರುವುದನ್ನು ನೋಡಿದರೆ, ಈ ನಿರ್ಧಾರ ವಿವಾದಾತ್ಮಕವಾಗಿದೆ.
ಸಕ್ರೆಬೈಲು ಶಿಬಿರದಿಂದ ದಾಂಡೇಲಿಯ ಕಾಳಿ ಹುಲಿ ಅಭಯಾರಣ್ಯಕ್ಕೆ ಮರಿ ಆನೆಯನ್ನು ತಾಯಿಯಿಂದ ಹಾಲುಣಿಸಲು ಕಳುಹಿಸಲಾದ ಕೃಷ್ಣ ಮತ್ತು ಅಭಿಮನ್ಯು ಆನೆಗಳನ್ನು ಮಾವುತರು ಹಾಗೂ ಕವಾಡಿಗಳೊಂದಿಗೆ ಕಳುಹಿಸಲಾಗಿತ್ತು. ನಂತರ ಮಾವುತರು ಹಿಂತಿರುಗಿದರೂ ಆನೆಗಳನ್ನು ದಾಂಡೇಲಿಯಲ್ಲಿಯೇ ಉಳಿಸಲಾಗಿದ್ದು, ಇದೀಗ ಆ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸುವ ತೀರ್ಮಾನ ಮಾಡಲಾಗಿದ್ದು. ಮಾವುತರ ಮೇಲ್ವಿಚಾರಣೆಯಿಲ್ಲದೆ ಆನೆಗಳನ್ನು ಸೆರೆ ಇಡುವುದು ನೈತಿಕವಾಗಿ ಮತ್ತು ಪ್ರಾಣಿ ಹಕ್ಕುಗಳ ದೃಷ್ಟಿಯಿಂದ ಪ್ರಶ್ನೆಗಳಿಗೆ ಕಾರಣವಾಗಿದೆ.
ಪರಿಸರ ಪ್ರೇಮಿಗಳು ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರರು ಈ ಕ್ರಮವನ್ನು ಖಂಡಿಸಿದ್ದು, ಶಿಬಿರಗಳ ಆನೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ತರಬೇತಿ ಪಡೆದ ಪ್ರಾಣಿಗಳನ್ನು 'ಉಡುಗೊರೆ' ಯಾಗಿ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa