ಬಾಗಲಕೋಟೆ, 11 ಮೇ (ಹಿ.ಸ.) :
ಆ್ಯಂಕರ್ : ವಾಹನ ದಟ್ಟಣೆಯಿಂದ ಕಂಗೆಟ್ಟಿರುವ ಹುಬ್ಬಳ್ಳಿ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಬದಲಾಗಲಿದ್ದು, ಶೀಘ್ರದಲ್ಲಿ ಯೋಜನೆಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ ಎಂದು ಸಂಸದ ಪಿ. ಸಿ. ಗದ್ದಿಗೌಡರ್ ತಿಳಿಸಿದರು.
ಹೆದ್ದಾರಿಯನ್ನು ವಿಸ್ತರಿಸಲು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆಸಕ್ತಿ ವಹಿಸಿದ್ದಾರೆ. ಚತುಷ್ಪಥ ಹೆದ್ದಾರಿಯ ವಿಸ್ತತ ಯೋಜನಾ ವರದಿ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿದ್ದಾರೆ. ಇಲಾಖೆಯ ವಾರ್ಷಿಕ ಆಯವ್ಯಯದಲ್ಲಿ ಹೆದ್ದಾರಿ ವಿಸ್ತರಣೆ ಯೋಜನೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹಾಗೂ ರಾಜ್ಯ ಸಭೆ ಸದಸ್ಯ ಭಾಂಡಗೆ, ಹೆದ್ದಾರಿ ವಿಸ್ತರಣೆಗಾಗಿ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದ್ದರು. ಮನವಿಗೆ ಸಕಾರಾತ್ಮಕವಾಗಿ ಸಚಿವರು ಸ್ಪಂದಿಸಿದ್ದು, ಕೆಲವೇ ತಿಂಗಳಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ತಿಳಿದು ಬಂದಿದೆ.
296 ಕಿಮೀ ಹೆದ್ದಾರಿ ಸೊಲ್ಲಾಪುರ ಹೆದ್ದಾರಿಯ ಪೈಕಿ ಸೊಲ್ಲಾಪುರದಿಂದ ವಿಜಯಪುರವರೆಗೆ 110 ಕಿಮೀ ಹೆದ್ದಾರಿ ಈಗಾಗಲೇ ಚತುಷ್ಪಥವಾಗಿ ಬದಲಾಗಿದೆ. ಬಾಕಿ 186 ಕಿ.ಮೀ ಹೆದ್ದಾರಿ ವಿಸ್ತರಣೆಯಾಗಲಿದೆ. ಕೆಲ ವರ್ಷಗಳ ಹಿಂದೆ ವಾಹನ ದಟ್ಟಣೆಯಿರದ ಕಾರಣ ಚತುಷ್ಪಥ ಯೋಜನೆಗೆ ಬಲ ದೊರೆತಿರಲಿಲ್ಲ. ಇದೀಗ ಈ ಮಾರ್ಗದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಚತುಷ್ಪಥವಾಗಿ ಬದಲಾಯಿಸಲು ಸೂಕ್ತವಾಗಿದೆ.
ಹೆದ್ದಾರಿ ವಿಸ್ತರಣೆಯ ಪ್ರಮುಖ ಅನುಕೂಲವೆಂದರೆ ಗದ್ದನಕೇರಿ ಕ್ರಾಸ್‌ನಲ್ಲಿ ಪ್ರೈಓವರ್ ನಿರ್ಮಾಣವಾಗಲಿದೆ. ಎರಡು ರಾಷ್ಟ್ರೀಯ ಮತ್ತು ಒಂದು ರಾಜ್ಯ ಹೆದ್ದಾರಿ ಕೂಡುವ ಗದ್ದನಕೇರಿ ಕ್ರಾಸ್ ಅಪಘಾತಗಳಿಗೆ ಹೆಸರುವಾಸಿ. ರಸ್ತೆ ಅಕ್ಕಪಕ್ಕ ಸೀಮಿತ ಜಾಗವಿರುವುದು ಇಲ್ಲಿ ವಾಹನ ದಟ್ಟಣೆ ಹೆಚ್ಚಲು ಕಾರಣ. ಬಸ್ ನಿಲ್ದಾಣವಿಲ್ಲದ ಕಾರಣ ಬಸ್ ಗಳು ರಸ್ತೆ ಪಕ್ಕದಲ್ಲಿಯೇ ನಿಲ್ಲುವುದು ಮತ್ತೊಂದು ಸಮಸ್ಯೆ. ಈ ಪ್ರದೇಶದಲ್ಲಿ ನಿಲ್ದಾಣ ನಿರ್ಮಿಸಿರುವ ಸರಕಾರದ ಚಿಂತನೆ ಸಾಕಾರವಾಗಿಲ್ಲ. ಸರಕಾರಿ ಜಾಗವಿರದ ಕಾರಣ ನಿಲ್ದಾಣ ನಿರ್ಮಾಣಗೊಂಡಿಲ್ಲ. ಹೈವೇ ವಿಸ್ತರಣೆಯಾಗಿ ಮೇಲ್ವೇತುವೆ ನಿರ್ಮಾಣವಾದರೆ ವಾಹನ ಸಂಚಾರ ನಿಯಂತ್ರಣವಾಗಲಿದೆ.
ವಾಹನ ಸಂಚಾರಕ್ಕೆ ಸಂಕಷ್ಟ :
ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿ ಹೆಸರಿಗಷ್ಟೇ ಆಗಿತ್ತು. ಹಲವು ಬಾರಿ ರಸ್ತೆ ದುರಸ್ತಿ ಕೈಗೊಂಡರೂ ವಾಹನಗಳು ರಸ್ತೆ ಪಕ್ಕದ ತಗ್ಗಿನಲ್ಲಿ ಓಲಾಡುವ ಸಮಸ್ಯೆ ತಪ್ಪಿಲ್ಲ. ಕೊಣ್ಣೂರ ಬಳಿ ಸೇತುವೆ ನೆರೆಯಿಂದ ಹಾಳಾಯಿತು. ನಂತರ ದುರಸ್ತಿ ಮಾಡಿದರೂ ಕ್ರಾಸ್ ನಿಂದ ಹುಬ್ಬಳ್ಳಿಗೆ 110 ಕಿ.ಮೀ. ಕ್ರಮಿಸಬೇಕಾದರೆ ಖಾಸಗಿ ವಾಹನಗಳಲ್ಲಿ ಕನಿಷ್ಠ ಎರಡೂವರೆ ಗಂಟೆ ಬೇಕು. ಬಸ್ ನಲ್ಲಿ ಈ ಅಂತರ ಕ್ರಮಿಸಲು ನಾಲ್ಕು ಗಂಟೆ ತಗಲುತ್ತದೆ.
ಸಚಿವ ನಿತಿನ್ ಗಡ್ಕರಿ ಅವರಿಗೆ ಹೆದ್ದಾರಿ ವಿಸ್ತರಣೆಗೆ ಮನವಿ ಮಾಡಿದ್ದೆವು. ಸಚಿವರು ಸ್ಪಂದಿಸಿ ಹೆದ್ದಾರಿ ಚತುಷ್ಪಥವಾಗಿ ವಿಸ್ತರಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಶೀಘ್ರವೇ ಡಿಪಿಆರ್ ಸಿದ್ಧವಾಗಲಿದೆ ಎಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande