ಕೊಪ್ಪಳ, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಮ್ಮ ಭಕ್ತಿ ಡಾಂಬಿಕವಾಗಿದ್ದರೆ ನಾವು ಮಾಡುವ ಕೆಲಸ ಕಾರ್ಯಗಳು ಅಪೂರ್ಣವಾಗುತ್ತವೆ ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷರಾದ ಶಿವಶಂಕರಪ್ಪ ಚನ್ನಿ ಹೇಳಿದ್ದಾರೆ.
ಅವರು ಬುಧವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇವರ ದಾಸಿಮಯ್ಯ ಜಯಂತಿ ಪ್ರತಿ ವರ್ಷ ಆಚರಿಸುತ್ತಿರುವ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆ. ದೇವರ ದಾಸಿಮಯ್ಯನವರು ಶ್ರೇಷ್ಠ ವಚನಕಾರರಾಗಿದ್ದು, ಅವರು ನೇಕಾರ ಸಮಾಜದಲ್ಲಿ ಹುಟ್ಟಿದ್ದು ನಮ್ಮ ನಿಮ್ಮ ಪುಣ್ಯ. ಶ್ರೀ ಶೈಲ ಮಲ್ಲಿಕಾರ್ಜುನ ಜಾತ್ರೆ ಪ್ರತಿ ವರ್ಷ ನಡೆಯುವ ಸಂದರ್ಭದಲ್ಲಿ ಅವರ ಶಿಖರಕ್ಕೆ ದೇವರ ದಾಸಿಮಯ್ಯನವರು ಬಂದು ಬಟ್ಟೆ ಸುತ್ತುತ್ತಾರೆ ಎಂಬ ನಂಬಿಕೆ ಇಂದಿಗೂ ಜನರಲ್ಲಿ ಇದೆ. ಅದು ಎಲ್ಲರಿಗೂ ಕಾಣುವದಿಲ್ಲ ಕೆಲವು ಜನರಿಗೆ ಮಾತ್ರ ಕಾಣುತ್ತದೆ ಎಂದು ಹೇಳುತ್ತಾರೆ ಎಂದರು.
ದೇವಾಂಗ ಸಮಾಜ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ತಿಮ್ಮಾಪೂರ ಅವರು ಮಾತನಾಡಿ, ದೇವರ ದಾಸಿಮಯ್ಯ ಅವರು ಯಾದಗಿರಿ ಜಿಲ್ಲೆಯ ಮುದನೂರ ಗ್ರಾಮದಲ್ಲಿ ಜನಿಸಿದರೆಂದು ಇತಿಹಾಸಗಳಿಂದ ತಿಳಿದು ಬರುತ್ತದೆ. ಚಾಲುಕ್ಯ ಅರಸ 2ನೇ ಜಯಸಿಂಹ ಶಾಸನ ಆಧಾರದ ಮೇಲೆ ಅವರ ಇತಿಹಾಸ ತಿಳಿಯುತ್ತದೆ. ಕನ್ನಡ ಸಾಹಿತ್ಯದಲ್ಲಿ ಅವರು ವಚನ ಸಾಹಿತ್ಯದ ಹರಿಕಾರರಾಗಿದ್ದಾರೆ ಎಂದರು.
ಅವರ 164 ವಚನಗಳು ನಮಗೆ ಇಲ್ಲಿಯವರೆಗೆ ದೊರೆತಿವೆ. ಇನ್ನೂ ಅವರ ಮೇಲೆ ಸಂಶೋಧನೆ ಆಗಬೇಕಿದೆ. 2015 ರಲ್ಲಿ ಸರ್ಕಾರದ ವತಿಯಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಇಳೆ ನಿಮ್ಮದಾನ ಬೆಳೆ ನಿಮ್ಮದಾನ. ಗಡ್ಡಮೀಸೆ ಬಂದರೆ ಗಂಡೆಂಬರು. ಮೊಲೆ ಮೂಡಿ ಬಂದರೆ ಹೆಣ್ಣೆಂಬರು ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ ಹೀಗೆ ಹಲವಾರು ವಚನಗಳನ್ನು ಅವರು ರಚಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಕೊಟ್ರೇಶ ಮರಬನಳ್ಳಿ, ದೇವಾಂಗ ಸಮಾಜದ ಮುಖಂಡರಾದ ನಾರಾಯಣಪ್ಪ ಕೊಳ್ಳಿ, ಚಂದ್ರಕಾಂತ ಬೆಟಗೇರಿ, ಪ್ರಹ್ಲಾದ ಅಗಳಿ, ಪಂಪಾಪತಿ ಅರಳಿಕಟ್ಟಿ, ನಾರಾಯಣಪ್ಪ ಹಾಗೂ ಪರಶುರಾಮ ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್