ಬಳ್ಳಾರಿ, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಹಕಾರಿ ಕ್ಷೇತ್ರದ ವಿಶ್ವಾಸಾರ್ಹ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ 2024-25 ರ ಆರ್ಥಿಕ ಸಾಲಿನಲ್ಲಿ ಒಟ್ಟು 2120 ಕೋಟಿ ರೂಪಾಯಿ ವಹಿವಾಟು ನಡೆಸಿ, ಶೇ. 19.18% ರಷ್ಟು ಪ್ರಗತಿ ಸಾಧಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಮೋಹಿತ್ ಮಸ್ಕಿ ಅವರು ತಿಳಿಸಿದ್ದಾರೆ.
ಸುಕೋ ಬ್ಯಾಂಕಿನ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‍ನ ಒಟ್ಟು ಲಾಭ 9.29 ಕೋಟಿ ರೂಪಾಯಿ ಆಗಿದ್ದು, ತೆರಿಗೆ ಪಾವತಿಯ ನಂತರ 6 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ. ಷೇರುದಾರರಿಗೆ ಶೇ. 09% ಲಾಭಾಂಶ ನೀಡಲು ಸಾಮಾನ್ಯ ಸಭೆಗೆ ಶಿಫಾರಸು ಮಾಡಲಾಗಿದೆ ಬ್ಯಾಂಕ್‍ನ ಆರಂಭದಿಂದಲೂ ಲಾಭಗಳಿಕೆ ಮತ್ತು ಪ್ರಗತಿ ಸಾಧಿಸುವಲ್ಲಿ ಸದಾ ಮುನ್ನಡೆಯಲ್ಲಿದೆ ಎಂದರು.
ಸುಕೋ ಬ್ಯಾಂಕ್ ಸಂಪೂರ್ಣ ಕರ್ನಾಟಕದಾದ್ಯಂತ ಕಾರ್ಯಕ್ಷೇತ್ರ ವ್ಯಾಪ್ತಿಯನ್ನು ಹೊಂದಿದ್ದು ಪ್ರಸ್ತುತ 29 ಶಾಖೆಗಳನ್ನು ಹೊಂದಿದೆ. ಒಟ್ಟು 1313 ಕೋಟಿ ರೂಪಾಯಿ ಮೊತ್ತದ ಠೇವಣಿ, ಒಟ್ಟು 807 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಿದೆ. ವಿತರಣೆ ಮಾಡಿರುವ ಒಟ್ಟು ಸಾಲದಲ್ಲಿ 25 ಲಕ್ಷ ರೂಪಾಯಿ ಒಳಗಿನ ಕಿರು ಸಾಲಗಳು 428 ಕೋಟಿ ರೂಪಾಯಿ ಆಗಿದ್ದು, ಈ ಮೊತ್ತ ಒಟ್ಟು ಸಾಲದ ಶೇ. 53.08% ರಷ್ಟು ಇದೆ. ಸುಕೋ ಬ್ಯಾಂಕ್ ಎಂಎಸ್‍ಎಂಇ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬ್ಯಾಂಕಿನ (ಎನ್‍ಪಿಎ) ಅನುತ್ಪಾದಕ ಆಸ್ತಿ ಶೇ. 5.6 ರಷ್ಟಿದೆ ಎಂದರು.
ಸುಕೋ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಮೊಬೈಲ್ ಅಪ್ ಅನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು ಆಪ್ ಮೂಲಕ ವ್ಯವಹಾರವನ್ನು ನಡೆಸುತ್ತಿದ್ದಾರೆ. ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ಕೇಂದ್ರ ಸರ್ಕಾರದ ಯುಪಿಐ ಹಣ ಪಾವತಿ ತಂತ್ರಜ್ಞಾನದ ವ್ಯವಸ್ಥೆಗೆ ಒಳಪಟ್ಟ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಯನ್ನು ಹೊಂದಿದೆ. ಸದಾಕಾಲ ತಂತ್ರಜ್ಞಾನ ಮತ್ತು ಆಧುನೀಕತೆಗಳನ್ನು ದೈನಂದಿನ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮವಾದ ಗ್ರಾಹಕ ಸೇವೆ ನೀಡುವ ಮೂಲಕ ಅನೇಕ ಪ್ರಥಮಗಳ ಗೌರವಕ್ಕೆ - ಕೀರ್ತಿಗೆ ಮತ್ತು ಅಭಿನಂದನೆಗಳಿಗೆ ಒಳಗಾಗಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ ಎಂದರು.
ಗ್ರಾಹಕರ ವಿಶ್ವಾಸ, ಷೇರುದಾರರ ಬೆಂಬಲ ಮತ್ತು ಗುಣಮಟ್ಟದ ಸೇವೆಯ ಮೂಲಕ ದಿನೇ ದಿನೇ ವೃದ್ಧ್ಧಿಗೊಳ್ಳುತ್ತಿರುವ ಸುಕೋ ಬ್ಯಾಂಕ್‍ನ ವ್ಯವಹಾರಕ್ಕೆ ಪಾರದರ್ಶಕತೆ, ತ್ವರಿತ ಸೇವೆ ಮತ್ತು ಸಕಾಲಿಕವಾಗಿ ಬಿಡುಗಡೆ ಆಗುತ್ತಿರುವ ಸಾಲಗಳೇ ಕಾರಣವಾಗಿವೆ ಎಂದರು.
ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್. ರವಿಸುಧಾಕರ್ ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ವೆಂಕಟ ಶಿವಯ್ಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್