ಹೊಸಪೇಟೆ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಸಕ್ತ ಆರ್ಥಿಕ ವರ್ಷ ಸಾವಿರ ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ಶೆಡ್ಯೂಲ್ ಬ್ಯಾಂಕ್ ಸ್ಥಾನ ಮಾನದ ಅರ್ಹತೆಗೆ ಮಾನದಂಡಕ್ಕೆ ವಿಕಾಸ ಬ್ಯಾಂಕ್ ಮಾನ್ಯತೆ ಪಡೆದಿದೆ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಅವರು ತಿಳಿಸಿದ್ದಾರೆ
ಹೊಸಪೇಟೆಯ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿದ ಅವರು 1656.40 ಕೋಟಿ ಒಟ್ಟು ವ್ಯವಹಾರ, 1016.00 ಕೋಟಿ ಠೇವಣಿ, 640.40 ಕೋಟಿ ಸಾಲ ವಿತರಿಸಿ, 4.87% ಒಟ್ಟು ಅನುತ್ಪಾದಕ ಆಸ್ತಿ, ಹಾಗೂ 1.87% ನಿವ್ವಳ ಅನುತ್ಪಾದಕ ಆಸ್ತಿ ಹೊಂದಿ ಪ್ರಸಕ್ತ ಆರ್ಥಿಕ ವರ್ಷ 21.31ಕೋಟಿ ಲಾಭಗಳಿಸಿದ್ದು ತೆರಿಗೆ ನಂತರದ ನಿವ್ವಳ ಲಾಭ 10.04 ಕೋಟಿಯಾಗಿದೆ ಎಂದು ಬ್ಯಾಂಕ್ ನ ಆರ್ಥಿಕ ಪ್ರಗತಿಯನ್ನು ತಿಳಿಸಿದರು.
ರಾಜ್ಯ ವ್ಯಾಪಿ ಕಾರ್ಯಕ್ಷೇತ್ರಹೊಂದಿದ್ದರೂ ಸದ್ಯ ರಾಜ್ಯದ 9ಜಿಲ್ಲೆಯಲ್ಲಿ 18 ಶಾಖೆಗಳನ್ನು ಹೊಂದಿದ್ದು ಕಳೆದ ವರ್ಷ 4 ಶಾಖೆಗಳು ಪ್ರಾರಂಭವಾಗಿವೆ. ಈ ಬಾರಿಯ ಆರ್ಥಿಕ ವರ್ಷಾಂತ್ಯಕ್ಕೆ ಬ್ಯಾಂಕ್ ರೂ. 1000 ಕೋಟಿ ಠೇವಣಿಯ ಗಡಿಯನ್ನು ದಾಟಿದ್ದು, ಇದೊಂದು ವಿಶೇಷ ಮೈಲಿಗಲ್ಲು ಸಾಧಿಸಿದಂತಾಗಿದೆ ಎಂದರು.
ನಮ್ಮ ಬಹುತೇಕ ಸದಸ್ಯರ ಹಾಗೂ ಗ್ರಾಹಕರ ಕನಸಾಗಿದ್ದ ಬ್ಯಾಂಕಿನ ಮುಖ್ಯ ಕಛೇರಿಯ ಸ್ವಂತ ಕಟ್ಟಡದ ಕಾರ್ಯವೂ ಭರದಿಂದ ಸಾಗಿದ್ದು, ಕೆಲವೇ ತಿಂಗಳಲ್ಲಿ ನಮ್ಮ ಬ್ಯಾಂಕ್ ಹೊಸಪೇಟೆಯಲ್ಲಿ ನೂತನ ಸ್ವಂತ ಕಟ್ಟಡಕ್ಕೆ ಪಾದಾರ್ಪಣೆ ಮಾಡಲಿದೆ ಎಂದರು.ಮುಖ್ಯವಾಗಿ ಸುಸಜ್ಜಿತ ಸಿಬ್ಬಂದಿಗಳ ತರಬೇತಿ ಕೇಂದ್ರವನ್ನು ಈ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯ ಹೊಂದಲಿರುವ ಈ ತರಬೇತಿ ಕೇಂದ್ರದಲ್ಲಿ ತರಬೇತಿ ಹಾಲ್ ಅಲ್ಲದೇ ತರಬೇತಾರ್ಥಿಗಳ ವಸತಿ ವ್ಯವಸ್ಥೆ ಕೂಡ ಹೊಂದಿರಲಿದೆ.
ರಾಜ್ಯಾದ್ಯಂತ ಕಾರ್ಯವ್ಯಾಪ್ತಿ ಹೊಂದಿರುವ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಮುಂಬರುವ ದಿನಗಳಲ್ಲಿ ಅಶಕ್ತ ಸಹಕಾರ ಬ್ಯಾಂಕುಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುವ ಮೂಲಕ ಸಹಕಾರ ಕ್ಷೇತ್ರಕ್ಕೆ ಚೈತನ್ಯ ತುಂಬುವ ತನ್ನ ಪ್ರಯತ್ನಗಳನ್ನು ಮುಂದುವರೆಸಲಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿಶೇಷವಾಗಿ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಸೇರಿದಂತೆ ಬೇಕಾದಂತಹ ಎಲ್ಲ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಹೊಂದುವತ್ತ ನಮ್ಮ ಬ್ಯಾಂಕ್ ವಿಶೇಷ ಆಸಕ್ತಿಯನ್ನು ಹೊಂದಿದ್ದು, ಈ ಕುರಿತಾಗಿ ವಿಶೇಷ ಪರಿಣಿತರ ತಂಡ ನಿರಂತರ ಕಾರ್ಯ ಮಾಡುತ್ತಿದೆ.
ಈ ಎಲ್ಲಾ ಸಾಧನೆಗಳಿಗೆ ಬೆನ್ನೆಲುಬಾಗಿ ನಿಲ್ಲುವ ನಮ್ಮ ಸಹಕಾರಿ ಸದಸ್ಯರು, ಸದಾ ಉತ್ಸಾಹಿ ಸಿಬ್ಬಂದಿ ವರ್ಗ, ಹಿತೈಶಿ ಗ್ರಾಹಕ ವೃಂದದ ಸಹಕಾರ ಸ್ಮರಣೀಯ ಎಂದರು.
ಗೋಷ್ಠಿಯಲ್ಲಿ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಬಿ.ಜೆ.ಕುಲಕರ್ಣಿ, ನಿರ್ದೇಶಕರಾದ ಚಂದಾಹುಸೇನ್, ಛಾಯಾದಿವಾಕರ, ರಮೇಶ ಪುರೋಹಿತ, ಕೆ.ವಿಕಾಸ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ. ಮಾಜಿ ನಿರ್ದೇಶಕರಾದ ಅನಂತ ಜೋಶಿ, ಕೆ.ಬಸವರಾಜ್, ವಿಠೋಬಣ್ಣಾ ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್